ಧಾರವಾಡ:
ಕವಿವಿ ಆಡಳಿತ ಕಚೇರಿ ಎದುರು ಜಮಾಯಿಸಿದ ಸಿಬ್ಬಂದಿ, ಪರಿಶಿಷ್ಟ ಪಂಗಡದ ನೌಕರರನ್ನು ಅವಾಚ್ಯವಾಗಿ ನಿಂದಿಸಿದ ಆರೋಪ ಹೊತ್ತ ಸಿಂಡಿಕೇಟ್ ಸದಸ್ಯ ಶ್ಯಾಮ್ ಮಲ್ಲನಗೌಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಏಟು ಕೊಟ್ಟು ನೌಕರರನ್ನು ಹೊರಹಾಕಬೇಕು ಎಂದು ಸದಸ್ಯರು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಬೋಧಕೇತರ ಸಿಬ್ಬಂದಿಯ ಕುರಿತು ಚರ್ಚೆ ನಡೆದಿತ್ತು. ಆಗ ಸದಸ್ಯ ಶ್ಯಾಮ ಮಲ್ಲನಗೌಡರ ಬೋಧಕೇತರ ಸಿಬ್ಬಂದಿಗೆ ''''''''ಏಟು ಕೊಟ್ಟು'''''''' ಹೊರಹಾಕಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ ಕವಿವಿ ನೌಕರರು ಪ್ರತಿಭಟನೆಯ ಹಾದಿ ಹಿಡಿದರು. ಬೋಧಕೇತರ ಸಿಬ್ಬಂದಿ ಯಾವುದೇ ಫಲಾಪೇಕ್ಷೆ ಇಲ್ಲದೇ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ ಈ ರೀತಿ ಮಾತನಾಡುವುದು ಸರಿಯಲ್ಲ. ಇದು ಸದಸ್ಯ ಸ್ಥಾನಕ್ಕೆ ಗೌರವ ಕೂಡ ತರುವುದಲ್ಲ ಎಂದು ಕಿಡಿಕಾರಿದರು.ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕವಿವಿ ಉಳಿಸಿ ಎಂಬ ಘೋಷಣೆ ಕೂಡ ಕೂಗಿದರು. ಕೂಡಲೇ ಸಿಂಡಿಕೇಟ್ ಸದಸ್ಯರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಕುಲಪತಿ ಡಾ. ಎ.ಎಂ. ಖಾನ್, ಕುಲಸಚಿವ ಶಂಕರ ವಣಕ್ಯಾಳ ಬಂದು ಮಾತುಕತೆ ನಡೆಸಿದರಾದರೂ ಪ್ರಯೋಜನವಾಗಲಿಲಲ್ಲ. ಕೊನೆಗೆ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡರ ಪ್ರತಿಭಟನಾ ಸ್ಥಳಕ್ಕೆ ಬಂದು ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ನೌಕರರು ತಿಳಿಸಿದ್ದಾರೆ.