ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ನಂತರ ಅವರು ಮಾತನಾಡಿ, ಫೆ. 25ರಂದು ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಿಂದ ನೂರಾರು ರೈತರು ಪಾದಯಾತ್ರೆಯಲ್ಲಿ ತೆರಳಿ ಮುಖ್ಯಮಂತ್ರಿಗಳಿಗೆ ರಾಜ್ಯ ರೈತ ಮುಖಂಡರ ಜೊತೆಗೂಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ರೈತರ ಬಹು ನಿರೀಕ್ಷಿತ ಉಡುತೊರೆ ಜಲಾಶಯ ನೀರಾವರಿ ಯೋಜನೆಗೆ ₹490 ಕೋಟಿ ಅನುದಾನ ನೀಡುವ ಮೂಲಕ ರೈತರ ಒತ್ತಾಯಕ್ಕೆ ಸರ್ಕಾರ ಕ್ರಮ ವಹಿಸಿರುವುದಕ್ಕೆ ಅಭಿನಂದನೆ ತಿಳಿಸಿದ್ದಾರೆ.ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಶಾಶ್ವತ ಕುಡಿಯುವ ನೀರಿನ ಹಾಗೂ ನೀರಾವರಿ ಯೋಜನೆಗೆ ಸರ್ಕಾರವನ್ನು ಒತ್ತಾಯಿಸಿ ಪಾದಯಾತ್ರೆಯಲ್ಲಿ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಪಂದಿಸಿ ರೈತರಿಗೆ ಬಜೆಟ್ ನಲ್ಲಿ ಅನುದಾನ ನೀಡಿರುವುದು ಹನೂರು ಕ್ಷೇತ್ರದ ಜನತೆಯ ನೀರಾವರಿ ಯೋಜನೆಗೆ ಅನುಕೂಲವಾಗಿದೆ ಎಂದು ತಿಳಿಸಿದರು. ರೈತ ಮುಖಂಡರಾದ ರವಿ ನಾಯ್ಡು ಇನ್ನಿತರ ರೈತ ಮುಖಂಡರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಮಾತನಾಡಿ, ಹನೂರು ಕ್ಷೇತ್ರಕ್ಕೆ ಶಾಸಕ ಎಂ. ಆರ್. ಮಂಜುನಾಥ್ ಅವರು ಕೊಟ್ಟ ಮಾತಿನಂತೆ, ನೀರಾವರಿ ಯೋಜನೆಗೆ ಕ್ಷೇತ್ರದ ಜನತೆಯ ಆಶಯದಂತೆ ಶಾಶ್ವತ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಉಸ್ತುವಾರಿ ಸಚಿವರು ಮತ್ತು ಎಚ್. ಸಿ. ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ನೀರಾವರಿ ಯೋಜನೆಗೆ ಬಜೆಟ್ ನಲ್ಲಿ ₹490 ಕೋಟಿ ಅನುಮೋದನೆ ನೀಡಲು ಶ್ರಮಿಸಿದ ಶಾಸಕರು ಕ್ಷೇತ್ರದ ಜನತೆಗೆ ಇನ್ನು ಹೆಚ್ಚಿನ ಅಭಿವೃದ್ಧಿಪಡಿಸಲು ಮಾದೇಶ್ವರ ಹೆಚ್ಚಿನ ಬಲ ನೀಡಲಿ ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.