ಕರ್ನಾಟಕ ಆರ್ಥಿಕತೆ ಹಳಿ ತಪ್ಪಿಸಿದೆ: ಶಾಸಕ

KannadaprabhaNewsNetwork |  
Published : Mar 07, 2026, 12:30 AM IST
ಪೋಟೋ: 06ಎಸ್‌ಎಂಜಿಕೆಪಿ04:ಎಸ್‌ಎನ್‌.ಚನ್ನಬಸಪ್ಪ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್ ಕರ್ನಾಟಕದ ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ ಎಂದು ಬಿಜೆಪಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಟೀಕಿಸಿದ್ದಾರೆ.

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ರ ಬಜೆಟ್ ಕರ್ನಾಟಕದ ಆರ್ಥಿಕ ಶಿಸ್ತನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ ಎಂದು ಬಿಜೆಪಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಟೀಕಿಸಿದ್ದಾರೆ.

ಕಳೆದ ವರ್ಷದ ರಾಜಸ್ವ ಸಂಗ್ರಹದಲ್ಲೇ 15,000 ಕೋಟಿ ರು.ಗಳಷ್ಟು ಭಾರಿ ಹಿನ್ನಡೆ ಅನುಭವಿಸಿರುವ ಈ ಸರ್ಕಾರ, ಈಗ ಯಾವ ನೈತಿಕ ಆಧಾರದ ಮೇಲೆ 3.15 ಲಕ್ಷ ಕೋಟಿ ರು. ಅತಿರೇಕದ ಆದಾಯದ ಗುರಿ ಇಟ್ಟುಕೊಂಡಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ವಾಸ್ತವದಲ್ಲಿ ದೇಶದ ಆರ್ಥಿಕತೆಯ ಚಾಲಕ ಶಕ್ತಿಯಾಗಿದ್ದ ಕರ್ನಾಟಕವನ್ನು ಇಂದು ಕೇವಲ ಒಂದು ನಿರ್ದಿಷ್ಟ ಸಮುದಾಯದ (ಮುಸಲ್ಮಾನರ) ಓಲೈಕೆಗಾಗಿ ಬಳಸಿಕೊಳ್ಳಲಾಗುತ್ತಿದೆ. ತಮ್ಮ ರಾಜಕೀಯ ಉಳಿವಿಗಾಗಿ ಇಡೀ ರಾಜ್ಯವನ್ನು ಸಾಲದ ಕೂಪಕ್ಕೆ ದೂಡಿರುವ ಈ ‘ಬ್ರದರ್ಸ್ ಬಜೆಟ್’ ಜನವಿರೋಧಿಯಾಗಿದೆ ಎಂದು ದೂರಿದ್ದಾರೆ.

ಈ ಬಜೆಟ್‌ನ ಭೀಕರತೆಯೆಂದರೆ, ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಯ ಶೇ. 88 ರಷ್ಟು ಭಾಗ ಕೇವಲ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸಲೇ ವ್ಯಯವಾಗುತ್ತಿದೆ. ಅಂದರೆ ಹೊಸ ರಸ್ತೆ, ನೀರಾವರಿ ಅಥವಾ ಮೂಲಸೌಕರ್ಯದಂತಹ ಆಸ್ತಿ ಸೃಜನೆಗೆ ಸರ್ಕಾರದ ಬಳಿ ಬಿಡಿಗಾಸೂ ಇಲ್ಲದಂತಾಗಿದೆ. ಅಚ್ಚರಿಯ ವಿಷಯವೆಂದರೆ, ಸರ್ಕಾರ 1.32 ಲಕ್ಷ ಕೋಟಿ ರು. ಸಾಲ ಮಾಡಲು ಹೊರಟಿದ್ದರೂ ಸಹ, ಆಸ್ತಿ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವುದು ಕೇವಲ 71,924 ಕೋಟಿ ರು. ಮಾತ್ರ! ಅಂದರೆ ಮಾಡಿದ ಸಾಲದ ಅರ್ಧದಷ್ಟು ಹಣವನ್ನು ಆಸ್ತಿ ಸೃಜನೆಗೆ ಬಳಸದೆ ದೈನಂದಿನ ಖರ್ಚುಗಳಿಗೆ ಪೋಲು ಮಾಡುತ್ತಿರುವುದು ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಕರಾಳ ಮುನ್ಸೂಚನೆಯಾಗಿದೆ.

ಕರ್ನಾಟಕದಂತಹ ಪ್ರಗತಿಪರ ರಾಜ್ಯವನ್ನು ''''''''ಆರ್ಥಿಕ ಸಾಹಸ ಪ್ರವೃತ್ತಿ''''''''ಯ ಮೂಲಕ ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಈ ಬಜೆಟ್ ಅನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ.

ಸಾಲ ಮಾಡಿ ಆಡಳಿತ ನಡೆಸುವುದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ''''''''ಕರ್ನಾಟಕ ಮಾಡೆಲ್'''''''' ಸಾಧನೆ ಎಂದು ಟೀಕಿಸಿದ್ದಾರೆ.

ಜನಪ್ರಿಯ ಅಂಶಗಳನ್ನು ಒಳಗೊಂಡಿದೆ: ಮಂಜುನಾಥ್‌:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ರ ಬಜೆಟ್ ಈ ಬಾರಿಯ ಬಜೆಟ್ ಭರವಸೆ ಮೂಡಿಸುವ ಹಾಗೂ ಜನಪ್ರಿಯ ಅಂಶಗಳನ್ನು ಒಳಗೊಂಡಿರುವ ಬಜೆಟ್ ಆಗಿದೆ. ಭವಿಷ್ಯದಲ್ಲಿ ಅನುಷ್ಠಾನವು ಅತ್ಯಂತ ಮುಖ್ಯವಾಗಿದೆ ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಹಾಗೂ ಆರ್ಥಿಕ ವಿಶ್ಲೇಷಕ ಡಾ. ಎಂ.ಎಸ್. ಮಂಜುನಾಥ್ ತಿಳಿಸಿದ್ದಾರೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಂಡಿದ್ದು, ಬೆಂಗಳೂರು ಹಾಗೂ ಮೈಸೂರಿಗೆ ಬರಪೂರ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಬಡ, ಮದ್ಯಮ ವರ್ಗ ಜನತೆಗೆ ಹಾಗೂ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆಯನ್ನು ಬಜೆಟ್ ನಲ್ಲಿ ನೀಡಲಾಗಿದೆ. ವಿವಿಧ ಇಲಾಖೆಗಳಿಗೆ ಸಾಕಷ್ಟು ಹಣ ವಿನಿಯೋಗಿಸಲಾಗಿದೆ. ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶಕ್ತಿ ಯೋಜನೆಗೆ 5300 ಕೋಟಿ ರೂ. ವಿನಿಯೋಗಿಸಲಾಗಿದೆ. ಜೊತೆಗೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ಅಬಕಾರಿ, ವಾಣಿಜ್ಯ ತೆರಿಗೆ, ನೋಂದಣಿ ಮುದ್ರಾಂಕ, ಮೋಟಾರ್ ವಾಹನ, ಗಣಿ ಮತ್ತು ಭೂ ವಿಜ್ಞಾನ ಇವುಗಳಿಂದ ಸಂಪನ್ಮೂಲ ಕ್ರೂಢೀಕರಣ ಮಾಡಲು ಆದ್ಯತೆ ನೀಡಲಾಗಿದೆ. ಸರ್ವೋದಯ, ಸ್ವಾವಲಂಬನೆ ಮತ್ತು ಅಂತ್ಯೋದಯ ತತ್ವಗಳ ನೈತಿಕ ಅಡಿಪಾಯದಲ್ಲಿ ಮುಂಗಡ ಪತ್ರವನ್ನು ಮಂಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಹಾಗೂ ಶಿವಮೊಗ್ಗ ಜಿಲ್ಲೆಗೆ ನೀಡಿದ ಶೈಕ್ಷಣಿಕ ಕೊಡುಗೆಯಾಗಿದೆ ಎಂದು ವಿವರಿಸಿದ್ದಾರೆ.

ಅಭಿವೃದ್ಧಿಗೆ ಬೀಗ ಹಾಕಿದ ಆಯವ್ಯಯ:

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅಭಿವೃದ್ಧಿ ಶೂನ್ಯವಾಗಿದ್ದು, ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಕರ್ನಾಟಕದ ಭವಿಷ್ಯವನ್ನು ಸಾಲದ ಸುಳಿಗೆ ತಳ್ಳಲಾಗಿದೆ, ಸಾಲ ಮಾಡಿಯಾದರು ತುಪ್ಪ ತಿನ್ನುವ ಸಂಸ್ಕೃತಿಯನ್ನು ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಟೀಕಿಸಿದ್ದಾರೆ.ರಾಜ್ಯದ ಒಟ್ಟು ಸಾಲವು 8.14 ಲಕ್ಷ ಕೋಟಿ ರು.ಗೆ ಏರಿದ್ದು, ಸಾಲ-ಜಿಎಸ್‌ಡಿಪಿ ಅನುಪಾತವು ನಿಗಧಿತ ಶೇ. 25 ಮಿತಿಯನ್ನು ಮೀರಿ ಶೇ.26.5 ತಲುಪಿದೆ. ಇದು ರಾಜ್ಯದ ಹಣಕಾಸು ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ಸರ್ಕಾರವು ಸಾಲದ ಮೇಲೆ ಸಾಲ ಮಾಡುತ್ತಿದ್ದು, 2024-25ರಿಂದ 2026-27ರ ಅವಧಿಗೆ ಅಂದಾಜು 3.5 ಲಕ್ಷ ಕೋಟಿ ರು.ಗೂ ಅಧಿಕ ಸಾಲ ಪಡೆಯುವ ಮೂಲಕ ರಾಜ್ಯವನ್ನು ದಿವಾಳಿಯತ್ತ ಒಯ್ಯುತ್ತಿದೆ ಎಂದು ದೂರಿದ್ದಾರೆ.

ಈ ಬಜೆಟ್ ಅಭಿವೃದ್ಧಿಗೆ ಪೂರಕವಾಗಿಲ್ಲ, ಬದಲಾಗಿ ಚುನಾವಣಾ ತಂತ್ರಗಾರಿಕೆಯ ಭಾಗವಾಗಿದೆ. ರಾಜ್ಯದ ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳುವ ಈ ನಡೆ ದೀರ್ಘಕಾಲದಲ್ಲಿ ಕರ್ನಾಟಕದ ಜನತೆಗೆ ಮಾರಕವಾಗಲಿದೆ ಎಂದು ಡಾ. ಧನಂಜಯ ಸರ್ಜಿ ಟೀಕಿಸಿದ್ದಾರೆ.

ಜೀರೋ ಪರ್ಸೆಂಟ್ ಅಭಿವೃದ್ಧಿ ಬಜೆಟ್‌:

ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್‌ ಮಂಡನೆ ಮಾಡಿದರೂ ಆ ದಾಖಲೆಗಳು ರಾಜ್ಯದ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗದೆ ಕರ್ನಾಟಕ ನಿಧಾನವಾಗಿ ಹಿನ್ನಡೆಯತ್ತ ಸಾಗುತ್ತಿರುವ ವಾಸ್ತವಿಕತೆಯನ್ನು ತೋರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್ ಟೀಕಿಸಿದ್ದಾರೆ.

ಈ ಬಾರಿ ಮಂಡಿಸಿರುವ 17ನೇ ಬಜೆಟ್ ರಾಜ್ಯದ ಭವಿಷ್ಯದ ಅಭಿವೃದ್ಧಿಗೆ ಸ್ಪಷ್ಟ ದಿಕ್ಕು ತೋರಿಸುವ ಬಜೆಟ್ ಆಗದೇ, ಸಾಲ ಹಾಗೂ ಘೋಷಣೆಗಳ ಮೇಲೆ ಅವಲಂಬಿತವಾಗಿರುವ ಬಜೆಟ್ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಒಟ್ಟು ಸಾಲವು ಈಗಾಗಲೇ ಸುಮಾರು 8.24 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಈ ವರ್ಷವೂ ಸುಮಾರು 97,449 ಕೋಟಿ ರುಪಾಯಿ ಹೊಸ ಸಾಲ ಪಡೆಯಲು ಸರ್ಕಾರ ಮುಂದಾಗಿರುವುದು ಆರ್ಥಿಕ ಶಿಸ್ತು ಕೊರತೆಯನ್ನು ತೋರಿಸುತ್ತದೆ.

ರಾಜ್ಯದ ಯುವಕರು ಇಂದು ಉದ್ಯೋಗಕ್ಕಾಗಿ ಆತಂಕದಲ್ಲಿದ್ದಾರೆ. ಬಜೆಟ್‌ನಲ್ಲಿ ಉದ್ಯೋಗದ ಬಗ್ಗೆ ಹಲವಾರು ಘೋಷಣೆಗಳನ್ನು ಮಾಡುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ರಾಜ್ಯ ಸರ್ಕಾರವು ತುಷ್ಟೀಕರಣ ಹಾಗೂ ಮತಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಕೈಗಾರಿಕೆ, ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ ಮತ್ತು ಯುವಕರಿಗೆ ನೈಜ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಹಾಗೂ ದೃಢವಾದ ನೀತಿಗಳನ್ನು ಜಾರಿಗೆ ತಂದು ಕರ್ನಾಟಕವನ್ನು ನಿಜವಾದ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತಮ ಆರೋಗ್ಯ, ಶಿಕ್ಷಣಕ್ಕೆ ಒತ್ತು ಕೊಟ್ಟಿದೆ:

ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯಕ್ಕೆ ಒತ್ತು ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರು,ದಲಿತರು, ಯುವಜನರು, ಕೈಗಾರಿಕೋದ್ಯಮಿ, ವ್ಯಾಪಾರ ಕ್ಷೇತ್ರದ ಹಿತ ಕಾಯುವಲ್ಲಿ ಬದ್ಧತೆ ತೋರಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಶ್ರೀಕಾಂತ್ ತಿಳಿಸಿದ್ದಾರೆ.

ರಾಜ್ಯದ ಆರ್ಥಿಕ ಸುಸ್ಥಿತಿಯ ಮಿತಿಯನ್ನು ಮೀರದೆ ಎಲ್ಲ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆಗಳನ್ನು ಬಜೆಟ್ ನಲ್ಲಿ ನೀಡಿದ್ದಾರೆ. ಜಿಡಿಪಿ ಶೇ ೮.೧ರಷ್ಟು ನೈಜ ಬೆಳವಣಿಗೆ ಆಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮತೋಲಿತ ಬೆಳವಣಿಗೆ ಇದಾಗಿದೆ. ಇಂತಹ ಆರ್ಥಿಕ ಕ್ರಮದಿಂದಾಗಿ ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೊಬ್ಬ ಆರ್ಥಿಕ ನಿಪುಣ ಎಂಬುದನ್ನು ಸಾಬೀತು ಪಡಿಸಿದ್ದಾರೆ.

೫೬.೪೩೨ ಹುದ್ದೆಗಳ ಭರ್ತಿಗೆ ಬದ್ಧತೆ ತೋರುವ ಮೂಲಕ ಮುಖ್ಯಮಂತ್ರಿಗಳು ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲೂ ಗಮನೀಯ ಬದಲಾವಣೆಗಳನ್ನು ತರಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಉನ್ನತೀಕರಣ ಶೈಕ್ಷಣಿಕ ಪ್ರಗತಿಯ ಪರಿಣಾಮಕಾರಿ ಹೆಜ್ಜೆ ಎನ್ನಬಹುದು.

ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ತೀವ್ರ ಆರ್ಥಿಕ ಪ್ರಗತಿಯನ್ನು ಸಾಧಿಸುವಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಸಫಲವಾಗಿದೆ ಎಂದು ತಿಳಿಸಿದ್ದಾರೆ.

ಇದು ಜರೊರವಾಗಿದೆ: ರಮೇಶ್‌ ಶಂಕರಘಟ್ಟ:

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17ನೇ ದಾಖಲೆ ಬಜೆಟ್‌ನಲ್ಲಿ ಹತ್ತನೇ ಕ್ಲಾಸಿನವರೆಗೆ ಎಲ್ಲರಿಗೂ ಉಚಿತ ಪುಸ್ತಕಗಳನ್ನು ಕೊಡುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಮುಖಂಡ ರಮೇಶ್‌ ಶಂಕರಘಟ್ಟ ತಿಳಿಸಿದ್ದಾರೆ.

1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ. ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರದ ಬಜೆಟ್‌ನಲ್ಲಿ 5,000 ಕೋಟಿ ರು. ಮೀಸಲಿರಿಸಲಾಗಿತ್ತು. ಆದರೆ ಒಂದು ನಯ ಪೈಸೆ ಬಿಡುಗಡೆ ಮಾಡಿರಲಿಲ್ಲ. ಆದರೆ ಈ ಬಾರಿ ರಾಜ್ಯ ಸರ್ಕಾರ ಆ ಯೋಜನೆಗೆ ಹಣ ಮಿಸಲಿಟ್ಟಿರುವುದು ಸ್ವಾಗತಾರ್ಹ. ಗಾಂಧೀಜಿಯವರ ಹೆಸರನ್ನು ಚಿರಸ್ಟಾಯೀ ಗೊಳಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಇಂದು ನಾಮಕರಣ ಮಾಡುತ್ತಿರುವುದು ಪ್ರಸಂಶನೀಯವಾದದು. ಒಟ್ಟಾರೆ ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್ ರೈತ ಪರವಾದ ಜನಪರವಾದ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುತೊರೆ ನೀರಾವರಿ ಯೋಜನೆ ಘೋಷಣೆ: ಜೆಡಿಎಸ್‌, ರೈತ ಸಂಘ ಸಂಭ್ರಮಾಚರಣೆ
ಬೇಗೂರು ಸಿದ್ದಪ್ಪಾಜಿ ದೇಗುಲಕ್ಕೆ ಶಾಸಕ ಗಣೇಶ್‌ ಪ್ರಸಾದ್ ದೇಣಿಗೆ