ಮೂಡುಬಿದಿರೆ: 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳದ ಯಶಸ್ವಿ ಆಯೋಜನೆಗಾಗಿ ಯುವ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿದ್ದು, ಯುವ ನಾಯಕರು ಈ ಉದ್ಯೋಗ ಮೇಳದ ಅಧಿಕೃತ ಪಾಲುದಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕರೆ ನೀಡಿದರು.

ಆಳ್ವಾಸ್ ಪ್ರಗತಿ ಹಿನ್ನೆಲೆಯಲ್ಲಿ ಭಾನುವಾರ ಮಿಜಾರಿನಲ್ಲಿ ಆಯೋಜಿಸಲಾದ ಯುವ ನಾಯಕರ ಸಮಾವೇಶ ಉದ್ದೇಶಿಸಿ ಮಾತನಾಡಿದರು.ಕಳೆದ ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯಾವುದೇ ಲಾಭದ ಉದ್ದೇಶವಿಲ್ಲದೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.ಆಳ್ವಾಸ್ ಪ್ರಗತಿ ಕೇವಲ ಉದ್ಯೋಗ ಮೇಳವಲ್ಲ. ಇದು ಸಾವಿರಾರು ಯುವಕರ ಜೀವನಕ್ಕೆ ಹೊಸ ದಿಕ್ಕು ನೀಡುವ ಸಾಮಾಜಿಕ ಚಳವಳಿಯಾಗಿದೆ. ಈ ಬಾರಿಯ ಉದ್ಯೋಗ ಮೇಳದ ಸಿದ್ಧತೆಗಾಗಿ ಕಳೆದ ಮೂರು ತಿಂಗಳಿಂದ 70ಕ್ಕೂ ಹೆಚ್ಚು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಮೇಳದ ದಿನದಂದು ಸುಮಾರು 2,500 ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಲಿದ್ದಾರೆ ಎಂದರು.ವಿಶ್ವ ಕಬ್ಬಡ್ಡಿ ಚಾಂಪಿಯನ್‌ಶಿಪ್ ವಿಜೇತ ಭಾರತ ತಂಡದ ಆಟಗಾರ್ತಿ ಹಾಗೂ ಆಳ್ವಾಸ್‌ನ ವಿದ್ಯಾರ್ಥಿನಿ ಧನಲಕ್ಷ್ಮೀ ಪೂಜಾರಿ ಗುಜರಾತ್ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ ಪಡೆದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.

ವಿವಿಧ ರಾಜಕೀಯ ಪಕ್ಷಗಳ ಯುವ ಮುಖಂಡರು, ಸಂಘ ಸಂಸ್ಥೆಗಳನ್ನು ಪ್ರತಿನಿಧಿಸುವ ಯುವ ನಾಯಕರು ಭಾಗವಹಿಸಿ, ಆಳ್ವಾಸ್ ಪ್ರಗತಿ ಕುರಿತು ತಮ್ಮ ಅಭಿಪ್ರಾಯಗಳು, ಸಲಹೆಗಳು ಮತ್ತು ಸೂಚನೆಗಳನ್ನು ಹಂಚಿಕೊಂಡರು. ಉಪನ್ಯಾಸಕ ಡಾ ವಿನಾಯಕ ಭಟ್ ಗಾಳಿಮನೆ ನಿರೂಪಿಸಿದರು.