ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ ಲಕ್ಷಾಂತ ರು. ಸರ್ಕಾರಿ ಅನುದಾನ ವ್ಯಯಿಸಿ ನಿರ್ಮಿಸಲಾದ ಸುಂಟಿಕೊಪ್ಪ ಗ್ರಾಪಂ ವ್ಯಾಪ್ತಿಯ ಕಸ ವಿಲೇವಾರಿ ಘಟಕವು ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ಶ್ವಾನಗಳ ಆವಾಸ ಸ್ಥಾನವಾಗಿ ಪರಿಣಮಿಸಿದ್ದು,ಮುಂದಿನಗಳಲ್ಲಿ ಈ ಭಾಗದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಬಾಧಿಸುವ ಆತಂಕ ಎದುರಾಗಿದೆ.ಆಹಾರ ಅರಸಿ ಬಂದ ಬೀದಿ ನಾಯಿಗಳು ಕಸ ವಿಲೇವಾರಿ ಘಟಕದಲ್ಲೇ ಬಿಡುಬಿಟ್ಟು, ಅವುಗಳ ಸಂತಾನೋತ್ಪತಿ ದ್ವಿಗುಣಗೊಳ್ಳುತ್ತಿದೆ. ಪರಿಣಾಮವಾಗಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಸುತ್ತಮುತ್ತಲಿನ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ತೋಟಗಳಲ್ಲಿ ಕೆಲಸ ನಿರ್ವಹಿಸುವ
ಕಾರ್ಮಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅಲ್ಲದೆ ಈ ಭಾಗದ ಶಾಲಾ ಮಕ್ಕಳು ಶಾಲೆ, ಕಾಲೇಜುಗಳಿಗೆತೆರಳುವ ಸಂದರ್ಭ ಭಯಭೀತರಾಗುತ್ತಿದ್ದಾರೆ ಎಂದು ಕಾರ್ಮಿಕರು ತಿಳಿಸಿದ್ದಾರೆ.ಈ ಸ್ಥಳದಲ್ಲಿ ಹಳಸಿದ ಆಹಾರ ಪದಾರ್ಥಗಳನ್ನು ತಿನ್ನುವ ಬೀದಿ ನಾಯಿಗಳು ಹುಚ್ಚು ಹಿಡಿದು ಇತರೆ ನಾಯಿಗಳಿಗೆ ಕಚ್ಚುವ ಮೂಲಕ ಮತ್ತಷ್ಟು ನಾಯಿಗಳು ಹುಚ್ಚು ನಾಯಿ ಕಡಿತದಿಂದ
ಅವುಗಳ ಸಂಖ್ಯೆ ದ್ವಿಗುಣಗೊಂಡು ಮಾನವರ ಮೇಲೆ ದಾಳಿ ನಡೆಸುತ್ತಿದ್ದು, ಸಂಬಂಧಿಸಿದ ಇಲಾಖೆಗಳು ಗಮನಹರಿಸಿ ಸೂಕ್ತ ಕ್ರಮ ಜರುಗಿಸಿ, ನಾಯಿಗಳ ಸಂತಾನ ಶಕ್ತಿ ಹರಣ ಕ್ರಮ ಕೈಗೊಂಡು ಅವುಗಳಸಂಖ್ಯೆಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕಸ ವಿಲೇವಾರಿ ಘಟಕದ ಸುತ್ತ ಭದ್ರವಾದ ಆವರಣ ಗೋಡೆ ನಿರ್ಮಿಸಿ, ವೈಜ್ಞಾನಿಕ ರೀತಿ ಕಸ
ನಿರ್ವಹಣೆ ಮಾಡಿದರೆ ನಾಯಿಗಳ ಹಾವಳಿ ನಿಯಂತ್ರಿಸಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಡುತ್ತಾರೆ. ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿಸಿದ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಈ ಭಾಗದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.