ಮಂಗಳೂರು: ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಯಶ್‌ಪಾಲ್ ಸುವರ್ಣ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಬೇಕು ಮತ್ತು ಅವರ ಶಾಸಕತ್ವ ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ನಗರದ ರಾಜಾಜಿ ಪಾರ್ಕ್‌ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದಾಗ ಅವರನ್ನು ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಆದರೆ ನನ್ನ ಅಭಿಪ್ರಾಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬೆಂಬಲಿಸದವರು ದೇಶದ್ರೋಹಿಗಳು ಎಂದರು. ಕಾಂಗ್ರೆಸ್ ಮುಖಂಡ ಎಂ.ಜಿ. ಹೆಗಡೆ ಮಾತನಾಡಿ, ಸೋನಿಯಾ ಗಾಂಧಿ ಅವರನ್ನು ಟೀಕಿಸಿದಾಗ ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ತಮ್ಮ ತಾಯಿ ಟೀಕಿಸಿದ್ದು ನೋವಾಯಿತೆಂದು ಮಧ್ಯ ರಾತ್ರಿ ವಿಡಿಯೊ ಮಾಡಿ ಹಾಕುತ್ತಾರೆ. ಹಿಂದೆ ನಿಮ್ಮದೇ ಪಕ್ಷದವರು ಮಹಿಳೆಯರನ್ನು ಟೀಕಿಸಿದಾಗ ವಿಡಿಯೊ ಮಾಡಬೇಕು ಎಂದು ಅನ್ನಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.ಶಾಸಕ ಯಶ್‌ಪಾಲ್ ಸುವರ್ಣರ ಪ್ರತಿಕೃತಿಯನ್ನು ರಸ್ತೆ ನಡುವೆ ತಂದಿಟ್ಟು ದಹನ ಮಾಡಲಾಯಿತು. ಯಶ್‌ಪಾಲ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಜೆ.ಆರ್.ಲೋಬೊ, ಮಿಥುನ್ ರೈ, ಇನಾಯತ್ ಅಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಪದ್ಮರಾಜ ಪೂಜಾರಿ, ಶಾಲೆಟ್ ಪಿಂಟೊ, ಅಪ್ಪಿ, ಸಾರಿಕಾ ಪೂಜಾರಿ, ಪಿಯುಸ್ ರಾಡ್ರಿಗಸ್, ಬೇಬಿ ಕುಂದರ್ ಮತ್ತಿತರರು ಇದ್ದರು.