ಪುತ್ತೂರು: ೧೬ ವಿವಿಧ ವರ್ಗಗಳ ದೈವಾರಾಧಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಉಡುಪಿ ಸಮಿತಿ ವತಿಯಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಒಕ್ಕೂಟದ ಕೇಂದ್ರೀಯ ಉಪಾಧ್ಯಕ್ಷ ನವೀನ್ ಪಾತ್ರಿ ಅವರು ದೈವಾರಾಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಯಾವುದೇ ಸೌಲಭ್ಯವನ್ನು ನೀಡಲಾಗುತ್ತಿಲ್ಲ. ಅವರಿಗೂ ಸರಕಾರಿ ಸೌಲಭ್ಯ ಸಿಗುವಂತಾಗಬೇಕು. ಈ ವಿಚಾರದ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ್ದೇವೆ.
ಸಂಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ ಮಾತನಾಡಿ, ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ೧೬ ವಿವಿಧ ವರ್ಗಗಳ ದೈವಾರಾಧಕರು ತಮ್ಮ ಧಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ಸೌಲಭ್ಯಕ್ಕಾಗಿ ನಾವು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಯಾರೂ ನಮಗೆ ಬೆಂಬಲವನ್ನು ನೀಡಿಲ್ಲ. ನಮ್ಮ ಮನವಿಯನ್ನು ಸರಕಾರಕ್ಕೆ ತಪುಪಿಸುವಲ್ಲಿ ನಮ್ಮ ಭಾಗದ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೀಗ ಪುತ್ತೂರು ಶಾಸಕರು ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತಾರೆ ಎಂಬ ನಂಬಿಕೆಯಿಂದ ಇಲ್ಲಿಗೆ ಬಂದು ಮನವಿ ಸಲ್ಲಿಸಿದ್ದೇವೆ.ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ನವೀನ್ ಪಾತ್ರಿ, ವಾಸು ಶೇರಿಗಾರ, ಘಟಕದ ಅಧ್ಯಕ್ಷ ಸುಂದರ ಪೂಜಾರಿ, ನಗರ ಘಟಕದ ಅಧ್ಯಕ್ಷ ಪ್ರಭಾಕರ್, ಕೋಶಾಧಿಕಾರಿ ಸಮಿತ ಶೆಟ್ಟಿ, ಸಂಘಟನೆ ಕಾರ್ಯದರ್ಶಿ ಬಾಲಚಂದ್ರ ಪೂಜಾರಿ, ಕೃಷ್ಣ ಪೂಜಾರಿ ಅಂಜಾರು, ರಾಮ ಉಪಸ್ಥಿತರಿದ್ದರು.