ಮಂಗಳೂರು: ಪಾದುವಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೆಜ್ಮೆಂಟ್‌ನ ಸಾಹಿತ್ಯ ಸಂಘ ಹಾಗೂ ಭಾಷಾ ವಿಭಾಗ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ‘ಸಣ್ಣ ಪತ್ರಿಕೆಗಳು ಮತ್ತು ಗ್ರಾಮೀಣ ಬದುಕು-ಶಿಕ್ಷಣ ನೀತಿ’ ವಿಷಯದಲ್ಲಿ ದತ್ತಿ ಉಪನ್ಯಾಸ ಶುಕ್ರವಾರ ನಡೆಯಿತು.
ಪಾದುವಾ ಕಾಲೇಜಿನ ಪ್ರಾಂಶುಪಾಲ ಗುರು ಅರುಣ್ ವಿಲ್ಸನ್ ಲೋಬೋ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಾರ್ಯಗಳನ್ನು ಶ್ಲಾಘಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ದಿನ ಪತ್ರಿಕೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಹೇಗೆ ಪೂರಕವಾಗಿದ್ದುವು ಎನ್ನುವುದನ್ನು ತಿಳಿಸಿದರು.ಉದಯವಾಣಿ ವರದಿಗಾರ ಉದಯಶಂಕರ್ ನೀರ್ಪಾಜೆ ಉಪನ್ಯಾಸ ನೀಡಿ, ಪತ್ರಿಕೆಗಳ ಅದರಲ್ಲೂ ಸಣ್ಣ ಪತ್ರಿಕೆಗಳು ಹಳ್ಳಿ ಹಳ್ಳಿಗಳಲ್ಲಿ ಓದುಗರನ್ನು ನಿರ್ಮಿಸಿದ, ಬೆಳೆಸಿದ ನೆಲೆಗಳನ್ನು ತಿಳಿಸಿದರು. ಹಿಂದಿನ ತಲೆಮಾರು ಪತ್ರಿಕೆಗಳಿಂದಲೇ ತಮ್ಮ ದಿನಚರಿ ಆರಂಭಿಸುತ್ತಿದ್ದುದರ ಕುಳಿತು ತಿಳಿಸಿ, ಇಂದಿನ ತಲೆಮಾರು ಪತ್ರಿಕೆಗಳಿಂದ ದೂರ ಸರಿದಿರುವುದರ ಕುರಿತು ಖೇದ ವ್ಯಕ್ತಪಡಿಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಪೀಳಿಗೆ ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹಾಜರಾಗುವುದರಿಂದ ಅವರ ವ್ಯಕ್ತಿತ್ವ ವಿಕಸನ ಹಾಗೂ ಜ್ಞಾನ ವೃದ್ಧಿಯಾಗಲಿದೆ ಎಂದರು.ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಸನತ್ ಕುಮಾರ್ ಜೈನ್ ಇದ್ದರು.ಉಪನ್ಯಾಸದ ದತ್ತಿಯ ಪ್ರಾಯೋಜಕ ಕಲಾದರ್ಶನದ ಶ್ರೀ ಭಾಸ್ಕರ ಹೊಸಮನೆ ಕಾಲೇಜಿನ ಸಾಹಿತ್ಯ ಸಂಘದ ಸಂಯೋಜಕಿ ಹಾಗೂ ಪ್ರಾಧ್ಯಾಪಕಿ ಪ್ರೊ.ಅಕ್ಷಯ ಶೆಟ್ಟಿ ಸ್ವಾಗತಿಸಿದರು. ಭಾಷಾ ವಿಭಾಗದ ಮುಖ್ಯಸ್ಥ ರಮೇಶ್ ವಂದಿಸಿದರು. ವಿದ್ಯಾರ್ಥಿನಿ ಪವಿತ್ರ ನಿರೂಪಿಸಿದರು.