ಕನ್ನಡಪ್ರಭ ವಾರ್ತೆ ಮಾಗಡಿ
ಬಾಲಕೃಷ್ಣರವರು ಈಗ ಅರಣ್ಯ ಇಲಾಖೆ ಜಮೀನುಗಳನ್ನು 20 ರಿಂದ 30 ಎಕರೆಗಳವರೆಗೂ ಬೇನಾಮಿ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳುತ್ತಿದ್ದು ಇದಕ್ಕೆಲ್ಲ ಅಧಿಕಾರಿಗಳು ಶಾಮೀಲು ಆಗಿದ್ದಾರೆ. ತಹಸೀಲ್ದಾರ್ ಶರತ್ ಕುಮಾರ್ ಈಗಾಗಲೇ 74 ಜನ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸರ್ವೇ ಅಧಿಕಾರಿಗಳ ಜೊತೆ ಶಾಮೀಲಾಗಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದರೂ ಕೂಡ ಪೊಲೀಸ್ ಅಧಿಕಾರಿಗಳು ದೂರಿನ ಬಗ್ಗೆ ಯಾವುದೇ ರೀತಿ ತನಿಖೆ ಕೈಗೊಳ್ಳುತ್ತಿಲ್ಲ. ಶೀಘ್ರದಲ್ಲೇ ಅಕ್ರಮಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಬಾಲಕೃಷ್ಣರವರ ಬಂಡವಾಳವನ್ನು ಜನಗಳ ಬಳಿ ಬಿಡುವ ಕೆಲಸ ಮಾಡಲಾಗುತ್ತದೆ. ಬಾಲಕೃಷ್ಣ ಅವರನ್ನು ಇದೇ ರೀತಿ ಬಿಟ್ಟರೆ ತಾಲೂಕಿನಲ್ಲಿ ಅರಣ್ಯ ಭೂಮಿ, ಸ್ಮಶಾನ ಕೆರೆಗಳು ಇಲ್ಲದಂತೆ ಭೂ ದಾಖಲಾತಿಗಳನ್ನು ಮಾಡಿಸಿ ತಮಗೆ ಬೇಕಾದವರಿಗೆ ಮಾರಾಟ ಮಾಡಿಕೊಳ್ಳುತ್ತಾರೆ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಎಚ್.ಎಂ. ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದರು.
ಕೋಟೆ ಸರ್ವೆ ಕಾರ್ಯಕ್ಕೆ ಸ್ಪಂದಿಸದ ಶಾಸಕರು ಏಕೆ ಬೇಕು:ಕೆಂಪೇಗೌಡರ ನಾಡಿನಲ್ಲಿ ಕೆಂಪೇಗೌಡರ ಪಳವಳಿಕೆಗಳನ್ನು ಉಳಿಸಿಕೊಳ್ಳುವ ಕೆಲಸವನ್ನು ಶಾಸಕರು ಮಾಡಬೇಕು. ಆದರೆ ಶಾಸಕರೇ ಪ್ರಾಚ್ಯ ವಸ್ತು ಇಲಾಖೆಯವರು ಮಾಗಡಿ ಕೋಟೆ ಒತ್ತುವರಿ ಬಗ್ಗೆ ಸರ್ವೆ ಅಧಿಕಾರಿಗಳಿಂದ ಸರ್ವೆ ಕಾರ್ಯ ಮಾಡಲು ಮುಂದಾದರೆ ಅಧಿಕಾರಿಗಳಿಗೆ ಯಾವುದೇ ದಾಖಲಾತಿಗಳನ್ನು ಕೊಡಬೇಡಿ ಅವರಿಗೆ ಸ್ಪಂದಿಸಬೇಡಿ ಎಂದು ಶಾಸಕ ಬಾಲಕೃಷ್ಣ ಅವರೇ ಹೇಳುತ್ತಿದ್ದಾರೆ. ಕೆಂಪೇಗೌಡರ ಕೋಟೆ ಒತ್ತುವರಿ ಉಳಿಸಲು ಸಹಕಾರ ನೀಡದ ಶಾಸಕ ಬಾಲಕೃಷ್ಣರವರು ಕ್ಷೇತ್ರಕ್ಕೆ ಬೇಕೆ? ಎಂದು ಕೃಷ್ಣಮೂರ್ತಿ ಪ್ರಶ್ನಿಸಿದರು.ದಲಿತ ಮುಖಂಡ ಮಾಡಬಾಳ್ ಜಯರಾಂ, ರೈತ ಸಂಘದ ಅಧ್ಯಕ್ಷ ಲೋಕೇಶ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಜೆಡಿಎಸ್ ಹಿರಿಯ ಮುಖಂಡ ತಮ್ಮಣ್ಣಗೌಡ, ಯುವ ಮುಖಂಡ ಆನಂದ್ ಗೌಡ, ಶಿವರಾಂ, ಗಂಗಾಧರ್, ಸೋಲೂರು ರಾಘವೇಂದ್ರ, ಮೋಹನ್, ಕೋಳಿ ಅಂಗಡಿ ಪುಟ್ಟ ಸ್ವಾಮಿ, ಆನಂದ್ ಭಾಗವಹಿಸಿದ್ದರು.