ಅತ್ಯಾಚಾರ ಆರೋಪ । ಅಶ್ಲೀಲ ವಿಡಿಯೋವಿನ ಪೆನ್‌ಡ್ರೈವ್ ಪ್ರಕರಣ ಸಿಬಿಐಗೆ ಒಪ್ಪಿಸಿ
ಎಚ್.ಡಿ.ರೇವಣ್ಣರ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಸರಿಯಿಲ್ಲ. ಅವರ ಮನಸ್ಸು ಹೂವಿನಂತೆ. ಹಾಗಾಗಿ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕ್ಷೇತ್ರದ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ‘ಪೆನ್‌ಡ್ರೈವ್ ವಿಚಾರವಾಗಿ ರೇವಣ್ಣ ಅವರನ್ನು ಜೈಲಿಗೆ ಹಾಕಿದ್ದು, ಪ್ರಜಾಪ್ರಭುತ್ವದಲ್ಲಿ ದೂರು ದಾಖಲಿಸಿದ ಒಂದೇ ದಿನದಲ್ಲಿ ಜೈಲಿಗೆ ಕಳುಹಿಸಿರುವುದು ನಮಗೆಲ್ಲಾ ಬೇಸರದ ಸಂಗತಿ. ರಾಜ್ಯ ಸರ್ಕಾರವು ಶೀಘ್ರದಲ್ಲಿಯೇ ಪ್ರಕರಣವನ್ನು ಹೊರ ತೆಗೆಯಬೇಕೆಂದು ಮನವಿ ಮಾಡುತ್ತೇನೆ. ನಾನು ನಾಲ್ಕು ದಿನ ಹೊರಗೆ ಹೋಗಿರುವುದಾಗಿ ಈಗಾಗಲೇ ಅಪಹರಣವಾಗಿದ್ದ ಮಹಿಳೆ ಹೇಳಿಕೆ ನೀಡಿದ್ದು, ನಿಜವಾದ ಸತ್ಯತೆಗೆ ಜಯ ಸಿಗಲಿದೆ ಎಂಬುದು ನನ್ನ ಭಾವನೆ’ ಎಂದು ಹೇಳಿದರು.‘ಪೆನ್‌ಡ್ರೈವ್ ಹಂಚಿಕೆ ಮಾಡಿರುವವರಿಗೂ ಶಿಕ್ಷೆ ಆಗಬೇಕು. ಏಕೆಂದರೆ ಮಹಿಳೆಯರ ಮತ್ತು ಹಾಸನದ ಗೌರವ ಕಳೆಯುವ ಕೆಲಸ ಮಾಡಲಾಗಿದೆ. ಪೊಲೀಸ್ ಮತ್ತು ಎಸ್‌ಐಟಿ ತಂಡವು ಈಗಾಗಲೇ ಇಬ್ಬರನ್ನೂ ಬಂಧಿಸಿದೆ. ಈ ಬಗ್ಗೆ ದೊಡ್ಡ ದೊಡ್ಡ ಕೈಗಳಿರುವ ಬಗ್ಗೆ ಕೇಳಿ ಬಂದಿದ್ದು, ಪೆನ್‌ಡ್ರೈವ್ ಯಾರು ಹಂಚಿಕೆ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಇಬ್ಬರು ಕೂಡ ಮಾಜಿ ಶಾಸಕರ ಆಪ್ತರು ಎಂದು ಮಾಧ್ಯಮದಲ್ಲಿ ನೋಡಿದ್ದು, ವಕೀಲರಾದ ದೇವರಾಜೇಗೌಡರು ವೈಯಕ್ತಿಕವಾಗಿ ಪರಿಚಯವಿಲ್ಲ. ಮಾಧ್ಯಮದಲ್ಲಿ ನನ್ನ ಬಗೆಯೂ ಕೀಳು ಮಟ್ಟದ ಹೇಳಿಕೆ ಕೊಟ್ಟರೂ ಕೂಡ ನಾನು ಪ್ರತಿಕ್ರಿಯೆ ಕೊಡಲು ಹೋಗಲಿಲ್ಲ. ಸತ್ಯತೆಯಲ್ಲಿ ಯಾರು ಇದ್ದಾರೆ ನನಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಇರಬಹುದು. ಮತ್ತೆ ಇತರರು ಯಾರೇ ಇರಬಹುದು ತಿಳಿದಿಲ್ಲ. ಇನ್ನು ಬಂಧನ ಆದವರು ಎಸ್‌ಐಟಿ ಅಧಿಕಾರಿಗಳಿಗೆ ಏನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ’ ಎಂದು ತಿಳಿಸಿದರು.