ರಾಮನಗರ: ಸೇವೆ ಕಾಯಂ, ಮಾಸಾಶನವನ್ನು 5 ಸಾವಿರ ರು.ವರೆಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷ ಚೇತನರು ನಡೆಸುತ್ತಿರುವ ವಿಧಾನಸೌಧ ಚಲೋ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಆಕ್ರೋಶಗೊಂಡ ವಿಶೇಷಚೇತನರು ಕಣಮಿಣಿಕೆ ಟೋಲ್ ಬಳಿ ಉರುಳು ಸೇವೆ ಮಾಡಿದರು. ಪೊಲೀಸರು ಮುಂದೆ ತೆರಳಲು ಅವಕಾಶ ನೀಡದಿದ್ದಾಗ ಆರ್.ಅಶೋಕ್ ಅವರೊಂದಿಗೆ ವಿಶೇಷ ಚೇತನರು ಸರ್ವಿಸ್ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ಮುಂದುವರೆಸಿದರು.
ನಿಮಗೆಲ್ಲ ಫ್ರೀಡಂ ಪಾರ್ಕಿಗೆ ಹೋಗಲು ಬಸ್ಸಿನ ವ್ಯವಸ್ಥೆ ಮಾಡುತ್ತೇವೆ. ಇಲ್ಲದಿದ್ದರೆ ಇಲ್ಲಿಯೇ ಕಲ್ಯಾಣ ಮಂಟಪದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ ಪೊಲೀಸರು ವಿಶೇಷ ಚೇತನರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ವಿಶೇಷ ಚೇತನರು ಒಪ್ಪಲಿಲ್ಲ.ಈ ವಿಷಯ ತಿಳಿದ ಕೂಡಲೇ ಶ್ರವಣಬೆಳಗೊಳದಿಂದ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಕುಮಾರಸ್ವಾಮಿರವರು, ವಿಕಲಚೇತರನ್ನು ರಸ್ತೆಯಲ್ಲಿಯೇ ತಡೆದಿದ್ದ ಪೊಲೀಸರ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಹಲವು ದಿನಗಳಿಂದ ರಾಮನಗರದಲ್ಲಿ ಧರಣಿ ನಡೆಸುತ್ತಿದೆವು. ತಮ್ಮ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸದ ಕಾರಣ ವಿಧಾನಸೌಧ ಚಲೋ ಆರಂಭಿಸಿದೆವು. ಆದರೆ, ಬೆಂಗಳೂರು ನಗರ ಪ್ರವೇಶಿಸುವುದಕ್ಕೆ ಪೊಲೀಸರು ತಡೆದಿದ್ದಾರೆ. ಅದಕ್ಕಾಗಿ ನಾವು ರಸ್ತೆಯಲ್ಲಿಯೇ ಧರಣಿ ಕೂರಬೇಕಾಯಿತು ಎಂದು ವಿಕಲಚೇತನರು ಸಚಿವರಲ್ಲಿ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು, ಆರ್.ಅಶೋಕ್, ಮಾಜಿ ಶಾಸಕ. ಎ.ಮಂಜುನಾಥ್ ಹಾಗೂ ವಿಕಲಚೇತನರ ಜತೆಯಲ್ಲಿ ರಸ್ತೆಯಲ್ಲಿಯೇ ಧರಣಿ ಕೂತರಲ್ಲದೆ, ಅವರ ಪಾದಯಾತ್ರೆಯನ್ನು ಫ್ರೀಡಂ ಪಾರ್ಕ್ ವರೆಗೂ ಅನುಮತಿಸದೆ ಹೋದರೆ ಇಲ್ಲಿಂದ ಮೇಲೆ ಏಳುವುದಿಲ್ಲ. ನಾವೆಲ್ಲರೂ ಇಡೀ ರಾತ್ರಿ ಇಲ್ಲಿಯೇ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ವಿರುದ್ಧ ಎಚ್ ಡಿಕೆ ಕಿಡಿ :
ಕಾಂಗ್ರೆಸ್ ಬೇರೆ ಉದೇಶಗಳಿಗೆ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿದೆ. ಭಾರತ್ ಜೋಡೋ ಸಂಘಗಳಿಗೆ ಸಾವಿರ ಕೋಟಿ ಕೊಡುವುದಕ್ಕೆ ಇವರ ಬಳಿ ಹಣವಿದೆ. ದುಡಿಯುವ ಯುವಕರಿಗೆ ಪುಕ್ಕಟೆ ಹಣ ಕೊಟ್ಟು ಮದ್ಯದ ಅಂಗಡಿಗೆ ಕಳುಹಿಸುತ್ತಿದ್ದಾರೆ. ಪ್ರತಿ ಪಂಚಾಯತಿಗೆ 10 ಲಕ್ಷ ಕೊಡುವುದಕ್ಕೆ ಇವರಿಗೆ ಕಷ್ಟ ಇಲ್ಲ. ಗ್ಯಾರಂಟಿ ಸಮಿತಿಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬಿಸಲು ನೂರಾರು ಕೋಟಿ ಕೊಡೋದಕ್ಕೆ. ಇವರತ್ತಿರ ದುಡ್ಡಿದೆ. ಆದರೆ ವಿಕಲಚೇತನರ ಬೇಡಿಕೆ ಈಡೇರಿಸಲು ಇವರ ಬಳಿ ಹಣ ಇಲ್ಲ. ಇಷ್ಟೆಲ್ಲಾ ಮಾಡುವ ಸರ್ಕಾರಕ್ಕೆ ವಿಕಲಚೇತನರಿಗೆ ಮಾಶಾಸನ ಕೊಡುವುದಕ್ಕೆ ಗತಿ ಇಲ್ಲ ಎಂದರೆ ಏನು ಹೇಳುವುದು. ಇದೊಂದು ದರಿದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಪಿಂಚಣಿ ಹಣ ಕೊಡಲಾಗದ ಮಾನಗೆಟ್ಟ ಸರ್ಕಾರ :
ಕಾಲು ಇಲ್ಲದವರನ್ನು ಬಂಧಿಸಲು ಮೂವರು ಡಿಸಿಗಳು ಬಂದಿದ್ದಾರೆ. ಅಲ್ಲೆಲ್ಲೊ ಟೆರರಿಸ್ಟ್ ಗಳು ಬಂದರೆ ಗುಂಡು ಹೊಡಿಯುತ್ತಾರೆಂಬ ಭಯದಿಂದ ಹೋಗುವುದಿಲ್ಲ. ಆದರೆ, ನಿಮ್ಮನ್ನು ಬಂಧಿಸಲು ಬಂದಿದ್ದಾರೆ. ಬಿಜೆಪಿ - ಜೆಡಿಎಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿಗರನ್ನು ಏಕೆ ಬಂಧಿಸಿಲ್ಲ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದರು.
------------------------------
...ಕೋಟ್ ...ವಿಕಲಚೇತನರು ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ನಡೆಸಲು ಅವಕಾಶ ಕೊಡಿಸಿದ್ದೇವೆ. ಅವರ ಜೊತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲುತ್ತೇವೆ. ರಾಜ್ಯ ಸರ್ಕಾರ ಮಾನವೀಯ ದೃಷ್ಟಿಯಿಂದ ಇವರ ಬೇಡಿಕೆಗಳನ್ನು ಈಡೇರಿಸಬೇಕು.
- ಕುಮಾರಸ್ವಾಮಿ, ಕೇಂದ್ರ ಸಚಿವರು.-------------------------------
18ಕೆಆರ್ ಎಂಎನ್ 3,4.ಜೆಪಿಜಿ3.ವಿಶೇಷ ಚೇತನರ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಪಾಲ್ಗೊಂಡಿರುವುದು.
4.ವಿಶೇಷ ಚೇತನರೊಂದಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಹೆಜ್ಜೆ ಹಾಕುತ್ತಿರುವುದು.-------------------------------