ಚನ್ನಪಟ್ಟಣ: ನಾನು ಮಾಡಿದ ಕೆಲಸ ಸಾಕ್ಷಿಗುಡ್ಡೆಗಳು ಕಣ್ಣಿಗೆ ಕಾಣುತ್ತಿವೆ, ನೀವು ಲೂಟಿ ಹೊಡೆದು ಕಳಿಸಿದ ಕಲ್ಲುಬಂಡೆಗಳ ಸಾಕ್ಷಿಗುಡ್ಡೆಗಳು ವಿದೇಶದಲ್ಲಿವೆ ಎಂದು ಕೆಲಸಗಳ ಸಾಕ್ಷಿಗುಡ್ಡೆ ಕೇಳಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ನೀಡಿದರು.
ಯಾವ ರೀತಿ ಸಾಕ್ಷಿಗುಡ್ಡೆ ಬೇಕು ಅವರಿಗೆ? ಆ ವ್ಯಕ್ತಿಗೆ ಸಾಕ್ಷಿಗುಡ್ಡೆ ಅರ್ಥ ಗೊತ್ತಿದೆಯಾ? ಕಾನೂನು ಬಾಹಿರವಾಗಿ ಕಲ್ಲು ಬಂಡೆಗಳನ್ನು ಲೂಟಿ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ. ಆ ಸಾಕ್ಷಿಗುಡ್ಡೆನಾ? ರಾಜ್ಯದ ಪ್ರಾಕೃತಿಕ ಸಂಪತ್ತು ಲೂಟಿ ಮಾಡಿದ ಬಗ್ಗೆ ಸಾಕ್ಷಿಗುಡ್ಡೆ ನೀಡಬೇಕಾಗಿತ್ತಾ ಎಂದು ಖಾರವಾಗಿ ಉತ್ತರಿಸಿದರು.
ಅವರ ಸಾಕ್ಷಿಗುಡ್ಡೆ ಏನು ಎನ್ನುವುದನ್ನು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ಅವರನ್ನು ಕೇಳಿದರೆ ಹೇಳುತ್ತಾರೆ. ಅವರ ಅಣ್ಣ ತಮ್ಮಂದಿರು ಚನ್ನಪಟ್ಟಣಕ್ಕೆ ಬಂದರೆ ಪೊರಕೆಯಲ್ಲಿ ಹೊಡೆಯುತ್ತಾರೆ ಅಂತ ಹೇಳಿದ್ದರು. ಇದಕ್ಕಿಂತಾ ಅವರ ಸಾಕ್ಷಿಗುಡ್ಡೆ ಬೇಕಾ? ಸಾತನೂರು ಕ್ಷೇತ್ರದಲ್ಲಿದ್ದ ಗ್ರಾಮಗಳಲ್ಲಿ ಅವರು ಏನು ಕೆಲಸ ಮಾಡಿದ್ದಾರೆ. ಅದನ್ನು ಈವರೆಗೂ ತಾಲೂಕು ಕೇಂದ್ರ ಮಾಡಲು ಆಗಲಿಲ್ಲ ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಬಾಕ್ಸ್.............
- ಸಿಎಂ, ಡಿಸಿಎಂ, ಸಚಿವರ ಮನೆಗಳಿಗೆ ರೈತರು ನುಗ್ಗುವ ದಿನಗಳು ದೂರವಿಲ್ಲ
ಚನ್ನಪಟ್ಟಣ: ವಕ್ಫ್ ವಿವಾದವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಸರಿ ಮಾಡದಿದ್ದರೆ ರೈತರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಮೊನ್ನೆ ಮೊನ್ನೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರೊಬ್ಬರು ರಾಜ್ಯಪಾಲರ ಮನೆಗೆ ಬಾಂಗ್ಲಾ ದೇಶದ ಪ್ರಧಾನಿ ಮನೆಗೆ ಜನ ನುಗ್ಗಿದಂತೆ ನುಗ್ಗುತ್ತಾರೆ ಅಂದಿದ್ದರು. ಅದೇ ಪರಿಸ್ಥಿತಿ ನಿಮಗೂ ಬಂದರೂ ಅಚ್ಚರಿ ಇಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟರು.
ರೈತರ ಭೂಮಿಯಾಗಲಿ, ಹಿಂದೂ ಮಠದ ಭೂಮಿಯಾಗಲಿ, ರಾಮನಗರದ ಗುಡ್ಡಬೆಟ್ಟವನ್ನು ವಕ್ಫ್ ಗೆ ನೀಡಲು ಯಾವುದೇ ಕಡತ ನನ್ನ ಬಳಿ ಬಂದಿರಲಿಲ್ಲ. ಯಾವ ದೃಷ್ಟಿಯಿಂದ ಸಿಎಂ ಅವರು ಹೇಳಿದ್ದಾರೋ ಗೊತ್ತಿಲ್ಲ. ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹೊರೆಸಬೇಡಿ. ಒಂದು ವೇಳೆ ನಮ್ಮ ತಪ್ಪಿದ್ದರೆ ಜನರ ಮುಂದೆ ಇಡಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ವಿನಾಕಾರಣ ನನ್ನನ್ನು ಎಳೆಯುವುದಾದರೆ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಪಲಾಯನ ಮಾಡುವುದಿಲ್ಲ. ಸಿಎಂ ಆದವರು ಸುಳ್ಳು ಹೇಳಬಾರದು. ಸತ್ಯ ಹರಿಶ್ಚಂದ್ರನಂತೆ ''''''''ಸತ್ಯಮೇವ ಜಯತೇ'''''''' ಜಪ ಮಾಡುತ್ತಾರೆ. ದಿನವೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
4ಕೆಆರ್ ಎಂಎನ್ 3.ಜೆಪಿಜಿ
ಚನ್ನಪಟ್ಟಣ ಕ್ಷೇತ್ರದ ಮಲ್ಲಮಗೆರೆ ಗ್ರಾಮದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಚಾರ ನಡೆಸಿದರು.