ಬಿಜೆಪಿ ಜೊತೆ ಸೇರಿ ಎಚ್ಡಿಕೆ ಮನುವಾದಿಯಾಗಿದ್ದಾರೆ - ಸಿದ್ದು ಮಜವಾದಿ: ಎಚ್ಡಿಕೆ

KannadaprabhaNewsNetwork |  
Published : Dec 07, 2025, 03:00 AM ISTUpdated : Dec 07, 2025, 10:41 AM IST
siddaramaiah

ಸಾರಾಂಶ

ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಜೊತೆ ಸೇರಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮನುವಾದಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗರದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು

  ಹಾಸನ :  ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಜೊತೆ ಸೇರಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮನುವಾದಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂಬ ಕುಮಾರಸ್ವಾಮಿ ಅವರ ಸಲಹೆಗೆ ಕಿಡಿ ಕಾರಿದ ಸಿದ್ದರಾಮಯ್ಯ, ಬಿಜೆಪಿ ಜೊತೆ ಸೇರಿದ ಮೇಲೆ ಕುಮಾರಸ್ವಾಮಿಯವರು ಮನುವಾದಿಯಾಗಿದ್ದಾರೆ ಎಂದು ಟೀಕಿಸಿದರು.

ಅಹಿಂದಗೆ ಸಿದ್ದರಾಮಯ್ಯ ಕೊಡುಗೆ ಏನು? ಹೇಳಿಕೆ

ಅಹಿಂದಗೆ ಸಿದ್ದರಾಮಯ್ಯ ಕೊಡುಗೆ ಏನು? ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರೈತರಿಗೆ ಮಣ್ಣಿನ ಮಗ (ಎಚ್‌.ಡಿ.ದೇವೇಗೌಡ)ನ ಪುತ್ರ (ಎಚ್ಡಿಕೆ) ಕೊಡುಗೆ ಏನು?’ ಎಂದು ಪ್ರಶ್ನಿಸಿದರು.

‘ನಮ್ಮ ಸರ್ಕಾರದಿಂದ ಭಾಗ್ಯಗಳ ಕಾರ್ಯಕ್ರಮ ಮಾಡಿರುವುದು ಬಡವರಿಗಾಗಿ. ಹೆಣ್ಣುಮಕ್ಕಳಿಗೆ, ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ, ಕಾರ್ಮಿಕರಿಗಾಗಿ. ಇವೆಲ್ಲಾ ಅಹಿಂದಪರ ಕಾರ್ಯಕ್ರಮಗಳಲ್ವಾ?. ಕೇಂದ್ರ ಸಚಿವರಾದವರು ಕೇಂದ್ರ ಸಚಿವರ ರೀತಿ ಮಾತನಾಡಬೇಕು. ಅವರು ರೈತನ ಮಗ ಅಲ್ಲವೆ?. ಮಂಡ್ಯದ ರೈತರಿಗೆ ಏನು ಕೊಡುಗೆ ಕೊಟ್ಟಿದ್ದಾರೆ?. ನಿನ್ನೆ ಫೈನಾನ್ಸ್, ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವುದರಿಂದ ರಾಜ್ಯಕ್ಕೆ 12 ಸಾವಿರ ಕೋಟಿ ರು.ನಷ್ಟ ಆಗುತ್ತಿದೆ. ಈ ನಷ್ಟದ ಬಗ್ಗೆ ಕುಮಾರಸ್ವಾಮಿ ಎಂದಾದರೂ ಕೇಂದ್ರ ಸಚಿವರಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರಾ?’ ಎಂದರು.

‘ಟೀಕೆ ಮಾಡುವುದಕ್ಕೋಸ್ಕರ ಮಾತನಾಡಬಾರದು. ನಾವು ಏನು ಮಾಡಿದ್ದೇವೆ ಅಂತ ಹೇಳುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ 1.08 ಲಕ್ಷ ಕೋಟಿ ರು. ಖರ್ಚು ಮಾಡಿದ್ದೇವೆ. ಬೇಕಾದರೆ ಪರಿಶೀಲಿಸಲಿ’ ಎಂದರು. ‘ಮಂಡ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವ ಕುಮಾರಸ್ವಾಮಿಯವರು, ಮೇಕೆದಾಟು ಯೋಜನೆ ಬಗ್ಗೆ ಕೇಂದ್ರದಿಂದ ಏಕೆ ಅನುಮತಿ ಕೊಡಿಸಲಿಲ್ಲ’ ಎಂದು ಪ್ರಶ್ನಿಸಿದರು. 

ಸಿದ್ದು ಮಜವಾದಿ: ಎಚ್ಡಿಕೆ

 ಮಂಡ್ಯ  : ಮಕ್ಕಳಿಗೆ ಸಂಸ್ಕಾರ ಕಲಿಸುವುದು ಸರ್ಕಾರಗಳ ಕರ್ತವ್ಯ. ಅದಕ್ಕಾಗಿ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವಂತೆ ಹೇಳಿದ್ದೇನೆ. ಮಕ್ಕಳನ್ನು ಮತಾಂತರ ಮಾಡುವಂತೆ ಹೇಳಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಮನುವಾದಿಯಾಗಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ, ಕಳೆದ 10 ವರ್ಷದಿಂದ ಅಹಿಂದ ಹೆಸರಿನಲ್ಲಿ ಮಜಾ‌‌ ಮಾಡಿದ್ದಾರೆ. ಸಿದ್ದರಾಮಯ್ಯರಿಂದ ಅಹಿಂದಕ್ಕೆ ಸಿಕ್ಕ ಕೊಡುಗೆ ಏನು?. 

ಅಹಿಂದ ಸಮಸ್ಯೆಯನ್ನು ಎಷ್ಟು ಬಗೆಹರಿಸಿದ್ದಾರೆ?. 

ಅಹಿಂದದಲ್ಲಿ ಹಲವು ಸಣ್ಣ ಜಾತಿ‌ಗಳಿವೆ. ಆ ಸಮಾಜಗಳಿಗೆ ಅವರ ಕೊಡುಗೆ ಏನು?. ಯಾರಿಗೆ ಅವರು ಆದ್ಯತೆ ಕೊಟ್ಟಿದ್ದಾರೆ?’ ಎಂದು ಪ್ರಶ್ನೆಗಳ ಸುರಿಮಳೆಗೈದರು. ‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಇಂದಿನ ಮಕ್ಕಳ ಬದುಕು, ಇವತ್ತಿನ ಸಮಾಜವನ್ನು ಯಾವ ರೀತಿ ಬೆಳೆಸುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ರಾಜ್ಯದಲ್ಲಿ ಕೊಲೆ, ಅತ್ಯಾಚಾರ, ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಕೆಟ್ಟ ವಾತಾವರಣ ಸೃಷ್ಟಿಯಾಗಿದೆ. ಅದಕ್ಕಾಗಿ ಮಕ್ಕಳಿಗೆ ಬದುಕಿನ ನಿಯಮಾವಳಿ ಜೊತೆ ಸಂಸ್ಕಾರ ಕಲಿಸಬೇಕಿದೆ’ ಎಂದರು.‘ಈಗಿನ ಸಮಾಜ ವೇಗವಾಗಿ ಬೆಳೆಯುತ್ತಿದೆ. ತಾಯಿ ಹೃದಯ ಎಂಬುದಿಲ್ಲ. ನಾನು ಚಿಕ್ಕವನಾಗಿದ್ದಾಗ ನೋಡಿದ ಸಮಾಜ ಈಗಿಲ್ಲ. ಈಗಿನ ಸಂಬಂಧ, ಸಮಾಜ ಸರಿಪಡಿಸುವ ನಿಟ್ಟಿನಲ್ಲಿ ಭಗವದ್ಗೀತೆ ಕಲಿಸುವುದಕ್ಕೆ ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ತಲೆಯಲ್ಲಿ ಇರುವುದು ಸಮಾಜದಲ್ಲಿ ಘರ್ಷಣೆ ಉಂಟುಮಾಡುವುದಷ್ಟೇ’ ಎಂದು ಕುಮಾರಸ್ವಾಮಿ ಕಿಡಿಕಾರಿದರು.ಸಂಬಂಧಿಕರ ಜೊತೆ ರಕ್ತದೋಕುಳಿ ನಡೆಸುವುದು ಬೇಡ ಎನ್ನುವುದು ಭಗವದ್ಗೀತೆಯಲ್ಲಿದೆ. ಭಗವದ್ಗೀತೆಯ ಸಾರಾಂಶವನ್ನು ಜನರಿಗೆ ತಿಳಿಸುವ ಅವಶ್ಯಕತೆ ಇದೆ. ಆದರೆ, ಈ ಸರ್ಕಾರ ಕಾನೂನುಬಾಹಿರ ಚಟುವಟಿಕೆಯನ್ನು ಬೆಂಬಲಿಸುತ್ತಿದೆ. ಅದಕ್ಕಾಗಿ ಭಗವದ್ಗೀತೆಯ ಬೋಧನೆ ಈ ಸಂದರ್ಭದಲ್ಲಿ ಅವಶ್ಯ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ