ಜನರನ್ನು ಮರುಳು ಮಾಡುವುದರಲ್ಲಿ ಎಚ್‌ಡಿಕೆ ನಿಸ್ಸೀಮರು: ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿ

KannadaprabhaNewsNetwork |  
Published : Oct 20, 2025, 01:02 AM IST
ಚಲುವರಾಯಸ್ವಾಮಿ | Kannada Prabha

ಸಾರಾಂಶ

ರಾಜ್ಯದಿಂದ ಹಲವಾರು ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ೨-೩ ಬಾರಿ ಮೋದಿ ಅವರನ್ನು ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಗೊಬ್ಬರ ಕೊರತೆಯಾದಾಗ ನಾನು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೆ, ಅವರು ಕೊಡಿಸಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜನರನ್ನು ಮರುಳು ಮಾಡುವುದರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ನಿಸ್ಸೀಮರು. ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳಿಕೊಂಡು ಜವಾಬ್ದಾರಿಯಿಂದ ಜಾರಿಕೊಳ್ಳುವುದನ್ನು ಕರಗತ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಒಂದೂವರೆ ವರ್ಷದಲ್ಲಿ ಒಂದೇ ಒಂದು ರುಪಾಯಿ ಉಪಯೋಗ ಕುಮಾರಸ್ವಾಮಿಯಿಂದ ರಾಜ್ಯಕ್ಕೆ ಆಗಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಟುವಾಗಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಆರು ತಿಂಗಳೋ, ವರ್ಷಕ್ಕೋ ಒಮ್ಮೆ ಬರುತ್ತಾರೆ. ಏನೋ ತೊಂದರೆಯಾಗಿದೆ ಎಂದು ತೋರಿಸಿಕೊಳ್ಳುತ್ತಾರೆ. ಮತ ಕೊಟ್ಟ ಕ್ಷೇತ್ರದ ಅಭಿವೃದ್ಧಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಬದ್ಧತೆ, ಇಚ್ಛಾಶಕ್ತಿ ಇಲ್ಲ. ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಅಸಹಕಾರ ತೋರುತ್ತಿದೆ ಎಂಬ ಹಳೇ ರಾಗವನ್ನು ಹಾಡಿ ಪಲಾಯನ ಮಾಡುತ್ತಿದ್ದಾರೆ. ಜನರು ಕೆಲಸ ಮಾಡುವವರನ್ನ್ನು ಬಿಟ್ಟು, ಅಂತಹವರನ್ನೇ ಇಷ್ಟಪಡುತ್ತಾರೆ. ಏನು ಮಾಡೋಕಾಗುತ್ತೆ ಎಂದು ಪ್ರಶ್ನಿಸಿದರು.

ಸಂಸದರ ಅನುದಾನ ಎಲ್ಲರಿಗೂ ಬಂದೇ ಬರುತ್ತದೆ. ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವುದು ದೊಡ್ಡಸ್ತಿಕೆಯಲ್ಲ. ವಿಶೇಷ ಅನುದಾನ ತಂದಿದ್ದರೆ ಅದನ್ನು ಸಾಧನೆ ಎನ್ನಬಹುದು. ಯಾವುದಾದರೊಂದು ಕಾರ್ಖಾನೆಯನ್ನೋ, ಕೈಗಾರಿಕೆಯನ್ನೋ ತಂದು ಉದ್ಯೋಗ ಸೃಷ್ಟಿಸಿರುವ ಬಗ್ಗೆ ಎಚ್‌ಡಿಕೆ ಪಟ್ಟಿ ಬಿಡುಗಡೆ ಮಾಡಲಿ. ಕೇಂದ್ರ ಸಚಿವರಾದವರು ಸಿಎಸ್‌ಆರ್ ಫಂಡ್ ತಂದಿದ್ದನ್ನು ಅವರ ಮಟ್ಟಕ್ಕೆ ಬಿಂಬಿಸಿಕೊಳ್ಳುವುದು ಯೋಗ್ಯತೆಯಲ್ಲ ಎಂದು ಕಟುವಾಗಿ ಹೇಳಿದರು.

ಮಂಡ್ಯದಲ್ಲಿ ಹಾದುಹೋಗಿರುವ ಬೆಂಗಳೂರು- ಮೈಸೂರು ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿಲ್ಲ. ಪ್ರಧಾನಿ ಬಳಿ ಕುಳಿತು ರಾಜ್ಯದ ಸಮಸ್ಯೆಗಳನ್ನು ವಿವರಿಸಿ ಬಗೆಹರಿಸಲು ಪ್ರಯತ್ನಿಸಬೇಕು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದಾರೆ.? ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದಾದರೂ ಒಂದು ಪತ್ರ ಬರೆದಿದ್ದಾರ? ರಾಜ್ಯದ ಕೈಗಾರಿಕಾ ಸಚಿವರನ್ನು ಭೇಟಿಯಾಗಿದ್ದಾರ? ಎಂದು ಪ್ರಶ್ನೆಗಳ ಸುರಿಮಳೆಗರೆದರು.

ರಾಜ್ಯದಿಂದ ಹಲವಾರು ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ. ೨-೩ ಬಾರಿ ಮೋದಿ ಅವರನ್ನು ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ. ರಾಜ್ಯದಲ್ಲಿ ಗೊಬ್ಬರ ಕೊರತೆಯಾದಾಗ ನಾನು ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೆ, ಅವರು ಕೊಡಿಸಲಿಲ್ಲ.

ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುವುದನ್ನು ಕುಮಾರಸ್ವಾಮಿ ಬಿಡಲಿ ಎಂದು ಹೇಳಿದರು.

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳ ಅಮಾನತುಗೊಳಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಆರ್‌ಎಸ್‌ಎಸ್ ಪಥ ಸಂಚಲನ ಆ ಸಂಘಟನೆಯ ವೈಯಕ್ತಿಕ ವಿಚಾರ. ಅದು ಬಿಜೆಪಿ ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಅದರ ಕಾರ್ಯಚಟುವಟಿಕೆ ನಿಷೇಧ ಕುರಿತು ಸರ್ಕಾರದ ತೀರ್ಮಾನವೇ ಅಂತಿಮ ಎಂದಷ್ಟೇ ಹೇಳಿದರು.

ಸಚಿವ ಸಂಪುಟ ಪುನಾರಚನೆ ವಿಚಾರವಾಗಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಚುಟುಕಾಗಿ ಉತ್ತರಿಸಿದರು.

ಈ ಬಾರಿ ಮಳೆಯಿಂದಾಗಿ ರಾಜ್ಯದಲ್ಲಿ ೧೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ೧೫ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಗದಿಪಡಿಸಿದ ಪರಿಹಾರಕ್ಕಿಂತ ೮೫೦೦ ರು. ಸಾವಿರ ಹೆಚ್ಚು ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ