ತೀರ್ಥಹಳ್ಳಿ: ಶಿಕ್ಷಣ ವ್ಯಕ್ತಿ ನಿರ್ಮಾಣದೊಂದಿಗೆ ರಾಷ್ಟ್ರಭಕ್ತಿ, ಮಾನವೀಯತೆ ಹಾಗೂ ಪ್ರಾಮಾಣಿಕತೆಯನ್ನೂ ಮೂಡಿಸುವ ಮಧ್ಯಮವಾಗಬೇಕು. ಹಿರಿಯರ ಸಂಶೋಧನೆಯಿಂದ ಮೂಡಿ ಬಂದಿರುವ ಚದುರಂಗ ಮತ್ತು ಯೋಗಾಸನ ಜಗತ್ತಿಗೆ ಭಾರತ ದೇಶದ ಕೊಡುಗೆಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತೀರ್ಥಹಳ್ಳಿ ಪಟ್ಟಣ ಸಮೀಪದ ಚಿಟ್ಟೇಬೈಲುನಲ್ಲಿರುವ ಪ್ರಜ್ಞಾಭಾರತಿ ಪ್ರೌಢಶಾಲೆಯ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆ, ಚಿನ್ನಭಂಡಾರ ಜಾನಕಮ್ಮ ಸಂಜೀವರಾವ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ ಬಾಲಕಿಯರ ಚೆಸ್ ಮತ್ತು ಯೋಗಾಸನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮಾನಸಿಕ ಮತ್ತು ದೈಹಿಕ ದೃಢತೆಯನ್ನು ಮೂಡಿಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಶಿಕ್ಷಣ ವ್ಯಕ್ತಿ ನಿರ್ಮಾಣ ಮಾತ್ರವಲ್ಲದೇ ರಾಷ್ಟ್ರಭಕ್ತಿಯೊಂದಿಗೆ ಮಾನವೀಯತೆ ಹಾಗೂ ಪ್ರಾಮಾಣಿಕತೆಯನ್ನೂ ಮೂಡಿಸುವ ಮಾಧ್ಯಮವಾಗಬೇಕಿದೆ. ವಿಶ್ವ ಮಾನ್ಯತೆಯನ್ನು ಪಡೆದಿರುವ ಪ್ರಸ್ತುತ 170 ರಾಷ್ಟ್ರಗಳ ಜನರು ಯೋಗಾಸನವನ್ನು ಅನುಸರಿಸುತ್ತಿರುವುದು ಭಾರತೀಯರಾದ ನಾವುಗಳು ಹೆಮ್ಮೆಪಡುವ ಸಂಗತಿಯಾಗಿದೆ. ಶೈಕ್ಷಣಿಕವಾಗಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವ ತಾಲೂಕಿನ ಕ್ರೀಡಾ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದವರೆಗೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್, ಈ ಕ್ರೀಡಾಕೂಟದಲ್ಲಿ ಜಿಲ್ಲೆಯ 7 ತಾಲೂಕು ವ್ಯಾಪ್ತಿಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ತೀರ್ಥಹಳ್ಳಿ ತಾಲೂಕಿನಿಂದ ವಿವಿಧ ಕ್ರೀಡೆಗಳಿಂದ 6 ತಂಡಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ ಎಂದು ತಿಳಿಸಿದರು.ಹೊದಲ ಅರಳಾಪುರ ಗ್ರಾಪಂ ಸದಸ್ಯ ವಿನಾಯಕ ಮಾತನಾಡಿ, ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಪ್ರಜ್ಞಾಭಾರತಿ ಶಾಲೆಯ ಶೈಕ್ಷಣಿಕ ಕಾಳಜಿ ಗಮನಾರ್ಹವಾಗಿದೆ ಎಂದರು. ಪ್ರಜ್ಞಾಭಾರತಿ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಹೆದ್ದೂರು ನವೀನ್, ಉಪಾಧ್ಯಕ್ಷ ರಾಮಚಂದ್ರ ಜೋಯ್ಸ್, ಆರ್.ಅಂಜನಪ್ಪ, ಎಂ.ಸಿ.ಮಂಜುನಾಥ್, ಕೆ.ವಿ.ರಮೇಶ್, ಆನಂದಪ್ಪ ಮತ್ತು ಶಾಲೆಯ ಮುಖ್ಯೋಪಾಧ್ಯಾಯಿನಿ ಅಂಬುಜಾ ಇದ್ದರು.