ಕನ್ನಡಪ್ರಭ ವಾರ್ತೆ ಬೆಂಗಳೂರು
ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ನಡೆಯಿತು. ಅಂಬರೀಷ್ ಅವರ ಮನೆ ನನಗೆ ಹೊಸದಲ್ಲ. ಹಲವಾರು ವರ್ಷಗಳ ಕಾಲ ಜತೆಗೂಡಿ ಬದುಕಿದವರು ನಾವು. ಹಲವಾರು ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಅವರಿಗೂ ಹಿತೈಷಿಗಳು ಮತ್ತು ಅಂಬರೀಷ್ ಅವರ ಅಭಿಮಾನಿಗಳು ಇದ್ದಾರೆ. ತಮ್ಮ ಮುಂದೆ ಯಾವ ಬೇಡಿಕೆಯನ್ನೂ ಅವರು ಇಟ್ಟಿಲ್ಲ. ಅವರು ಬಿಜೆಪಿ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದರು.ರಾಜಕೀಯ ಚದುರಂಗದಾಟ- ಸುಮಲತಾ:ಸುಮಲತಾ ಅಂಬರೀಷ್ ಅವರು ಮಾತನಾಡಿ, ಕುಮಾರಸ್ವಾಮಿ ಅವರೊಂದಿಗೆ ಆರೋಗ್ಯಕರ ಚರ್ಚೆ ನಡೆದಿದೆ. ಹಳೆಯದನ್ನು ಅಥವಾ ಭಿನ್ನಾಭಿಪ್ರಾಯಗಳು ಇದ್ದರೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂದಿದ್ದಾರೆ. ಮುಂದಿನ ನಡೆ ಬಗ್ಗೆ ಚರ್ಚೆ ನಡೆದಿದೆ. ನಿಮ್ಮ ಸಹಕಾರ ಇರಲಿ ಎಂದು ಕೇಳಿದರು. ನಾನು ಬುಧವಾರ ಮಂಡ್ಯದಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಹಿತೈಷಿಗಳ ಸಲಹೆ ಪಡೆದು ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದೇನೆ ಎಂದು ಮಾಹಿತಿ ನೀಡಿದರು.ನಾವೆಲ್ಲರೂ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸಬೇಕು ಎಂಬ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ. ಈ ಐದು ವರ್ಷಗಳಲ್ಲಿ ರಾಜಕೀಯ ನನಗೆ ಹಲವಾರು ಪಾಠ ಕಲಿಸಿದೆ. ಇದೊಂದು ಚದುರಂಗದ ಆಟ ಎಂಬುದರಲ್ಲಿ ಸಂಶಯವಿಲ್ಲ. ಬದಲಾವಣೆ ಆಗುತ್ತಿರುತ್ತದೆ. ಮಂಡ್ಯ ಜಿಲ್ಲೆಯ ಜನತೆಗೆ ಒಳ್ಳೆಯದಾಗುವಂಥ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುಮಲತಾ, ಈ ಚುನಾವಣೆಯಲ್ಲಿ ಬಿಜೆಪಿಯವರು ಮಂಡ್ಯ ಕ್ಷೇತ್ರ ಉಳಿಸಿಕೊಂಡು ನನಗೆ ಟಿಕೆಟ್ ನೀಡದೇ ಇದ್ದಿದ್ದರೆ ಅದು ಬೇರೆ ಆಗುತ್ತಿತ್ತು. ಆದರೆ, ಈಗ ಹಾಗೆ ಆಗಿಲ್ಲ. ಕೆಲವೊಮ್ಮೆ ಹಿನ್ನಡೆ ಆಗುತ್ತದೆ. ರಸ್ತೆಯಲ್ಲಿ ಸಂಚರಿಸುವಾಗ ಹಂಪ್ ಬಂದರೆ ಸ್ವಲ್ಪ ವೇಗ ಕಡಮೆ ಮಾಡಿಕೊಂಡು ಮುಂದೆ ಮತ್ತೆ ಗಾಡಿ ವೇಗ ಹೆಚ್ಚಿಸಿಕೊಳ್ಳಬೇಕು. ಬಿಜೆಪಿ ನನಗೆ ಎಲ್ಲ ಆಯ್ಕೆಗಳನ್ನೂ ನೀಡಿತ್ತು. ಆದರೆ, ನಾನು ನನ್ನ ನಿರ್ಧಾರ ತೆಗೆದುಕೊಂಡೆ ಎಂದರು.