ಎಚ್‌ಡಿಕೆ ಆರೋಗ್ಯ ಸ್ಥಿರ: ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork | Updated : May 13 2025, 12:29 PM IST
Follow Us

ಸಾರಾಂಶ

ಜನರ ಆಶೀರ್ವಾದಿಂದ ಎಚ್‌.ಡಿ.ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ಯಾವ ಸಮಸ್ಯೆಯೂ ಇಲ್ಲ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

 ಮಂಡ್ಯ : ಜನರ ಆಶೀರ್ವಾದಿಂದ ಎಚ್‌.ಡಿ.ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ಯಾವ ಸಮಸ್ಯೆಯೂ ಇಲ್ಲ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಡಜನರಿಗೆ ನಿವೇಶನ ಕೊಡುತ್ತೇನೆಂದು ಕುಮಾರಸ್ವಾಮಿ ಹಣ ಕಟ್ಟಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಮನಗರದ ರಾಜಕಾರಣಕ್ಕೆ ಎಚ್‌.ಡಿ.ದೇವೇಗೌಡ ಅವರು 1994ರಲ್ಲಿ ಪಾದಾರ್ಪಣೆ ಮಾಡಿ 30 ವರ್ಷವಾಗಿತ್ತು. ಅದಾದ ನಂತರ ಎಚ್‌.ಡಿ.ಕುಮಾರಸ್ವಾಮಿ ಅವರು ರಾಮನಗರ ಜನರ ಸೇವೆ ಮಾಡಿರುವುದು ನೀವೆಲ್ಲ ನೋಡಿದ್ದೀರಾ, ಯಾವ ಹಣವನ್ನು ನಾವು ನಿವೇಶನ ಕೊಡುತ್ತೇವೆಂದು ಕಟ್ಟಿಸಿಕೊಂಡಿಲ್ಲ, ಈ ಆರೋಪ ಮಾಡಿರುವವರನ್ನೇ ಕೇಳಿ ಎಂದು ಉತ್ತರಿಸಿದರು.

ಜೂನ್‌ ತಿಂಗಳಿಂದ ಎಚ್‌.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲಿದ್ದೇವೆ. ಕುಮಾರಸ್ವಾಮಿ ಅವರ ಸಹಕಾರದೊಂದಿಗೆ ಯುವಕರ ಜೊತೆಗೂಡಿಕೊಂಡು ಸಂಘಟನೆ ಮಾಡಲಾಗುವುದು ಎಂದು ಹೇಳಿದರು.

ಪಹಲ್ಗಾಮ್‌ ಘಟನೆಗೆ ಸಂಬಂಧಿಸಿದಂತೆ ತಕ್ಕ ಉತ್ತರ ಕೊಡಲು ಯಾರ ಮಾತನ್ನೂ ಕೇಳುವ ಅವಶ್ಯಕತೆ ಇಲ್ಲ. ಆಪರೇಷನ್‌ ಸಿಂದೂರದ ಮೂಲಕವೇ ಉಗ್ರರಿಗೆ ಹಾಗೂ ಅವರನ್ನು ಸಾಕುತ್ತಿರುವವರಿಗೆ ಸಂದೇಶ ನೀಡಿದ್ದೇವೆ ಎಂದರು.

ಪ್ರತಿಭೆ ಅನಾವರಣಕ್ಕೆ ಶಿಬಿರ ಸಹಕಾರಿ: ನಿಖಿಲ್‌ ಕುಮಾರಸ್ವಾಮಿ

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹೊರಹಾಕಲು ಬೇಸಿಗೆ ಶಿಬಿರಗಳು ಸಹಕಾರಿ ಆಗಿವೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಜೆಡಿಎಸ್‌ ಪಕ್ಷದಿಂದ ಸೋಮವಾರ ಆರಂಭವಾದ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಬೇಸಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ದೇಶ ಸೇವೆ ಮಾಡುವ ಮನೋಭಾವವನ್ನು ವಿದ್ಯಾರ್ಥಿ ದಿಸೆಯಿಂದಲೇ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಗಡಿಭಾಗದಲ್ಲಿ ಯೋಧರು ದೇಶ ರಕ್ಷಣೆ ಮಾಡುತ್ತಿರುವುದರಿಂದಲೇ ನಾವು ನೀವು ಎಲ್ಲರೂ ನೆಮ್ಮದಿ ಜೀವನ ನಡೆಸುತ್ತಿದ್ದೇವೆ ಎಂದರು.

ಈಚೆಗೆ ನಡೆದ ಪಹಲ್ಗಾಮ್‌ ದಾಳಿಯಲ್ಲಿ ಅಮಾಯಕರು ಬಲಿಯಾದರು. ಅವರ ಆ‌ತ್ಮಕ್ಕೆ ಶಾಂತಿ ಸಿಗಲೆಂದು ಮಕ್ಕಳೆಲ್ಲ ಸೇರಿ ಮೇಣದ ಬತ್ತಿ ಹಿಡಿದು ಗೌರವ ಸಲ್ಲಿಸುತ್ತಿದ್ದಾರೆ. ವೀರ ಯೋಧರನ್ನು ಗೌರವಿಸುವ ಮನೋಭಾವ ಎಲ್ಲರಲ್ಲಿಯೂ ಇರಬೇಕು. ಅವರಂತೆಯೇ ದೇಶ ರಕ್ಷಣೆಗೆ ಸೇರ್ಪಡೆಗೊಳ್ಳಬೇಕು ಎಂದು ಸಲಹೆ ನೀಡಿದರು.

320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕರಾಟೆ, ಚಿತ್ರಕಲೆ ಸೇರಿದಂತೆ ವಿವಿಧ ಕಲಾತ್ಮಕ ಹಾಗೂ ಮಕ್ಕಳ ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತಹ ಕಾರ್ಯಕ್ರಮಗಳನ್ನು ಪರಿಚಯಿಸುವ ಕೆಲಸ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ಬಿ.ಆರ್‌.ರಾಮಚಂದ್ರು, ಮುಖಂಡರಾದ ನವೀನ್‌, ಕಾಳೇಗೌಡ, ಅರವಿಂದ್‌, ಸುರೇಶ್‌ ಭಾಗವಹಿಸಿದ್ದರು.