- ಕುಮಾರಣ್ಣ ನಿನಗೆ ಉಪಕಾರ ಸ್ಮರಣೆ ಇರಲಿ - 2028ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆರಾಮನಗರ: ನಿಮ್ಮ ಪಕ್ಷದ ಬಾವುಟ ಇಲ್ಲದೇ ಪಾದಯಾತ್ರೆ ಮಾಡುತ್ತಿದ್ದೀರಲ್ಲ, ನಿಮಗೆ ಸ್ವಾಭಿಮಾನ ಏನಾದರೂ ಇದೆಯೇ? ನಿನ್ನೊಬ್ಬನ ಅಧಿಕಾರಕ್ಕಾಗಿ ಪಕ್ಷವನ್ನೇ ತ್ಯಾಗ ಮಾಡಿದಿಯಲ್ಲ ಅದಕ್ಕಾಗಿ ನಿನಗೆ ಸಾಷ್ಟಾಂಗ ನಮಸ್ಕಾರ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಕುಮಾರಸ್ವಾಮಿರವರೆ ನಿಮ್ಮ ತಂದೆ ಈ ಜಿಲ್ಲೆಗೆ ಬಂದು ನನ್ನ ಕರ್ಮಭೂಮಿ, ಪುಣ್ಯಭೂಮಿ ಎಂದು ಹೇಳಿ ಇಡೀ ಕುಟುಂಬ ಅಧಿಕಾರ ಅನುಭವಿಸುವಂತೆ ಮಾಡಿದರು. ನಿಮ್ಮ ತಂದೆ ಈ ಜಿಲ್ಲೆಯಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾದರು. ನಿಮ್ಮ ಧರ್ಮಪತ್ನಿ ಇದೇ ಜಿಲ್ಲೆಯಲ್ಲಿ ಶಾಸಕರಾದರು. ನೀನು ಈ ಭಾಗದಿಂದ ಸಂಸದನಾಗಿ, ಶಾಸಕನಾಗಿ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದೆ. ಆದರೂ ನಿಮ್ಮ ಪಕ್ಷದ ಬಾವುಟ ಇಲ್ಲದೇ ಈ ಪಾದಯಾತ್ರೆ ಮಾಡುತ್ತಿದ್ದೀರಲ್ಲ. ನಿಮಗೆ ಸ್ವಾಭಿಮಾನ ಏನಾದರೂ ಇದೆಯೇ ಎಂದು ಲೇವಡಿ ಮಾಡಿದರು.
ಕುಮಾರಣ್ಣ ನಾನು ಪರಮೇಶ್ವರ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಮುಂದಾದೆವು. ಆಗ ಸಿದ್ದರಾಮಯ್ಯನವರು ಬಂದು 38 ಶಾಸಕರಿದ್ದ ನಿನ್ನನ್ನು ಮುಖ್ಯಮಂತ್ರಿ ಮಾಡಲು 82 ಶಾಸಕರಿದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಬರೆದುಕೊಟ್ಟಿದ್ದೆವು. ನಿನಗೆ ಉಪಕಾರ ಸ್ಮರಣೆ ಇರಬೇಕು. ನಿಮ್ಮ ಆಸ್ತಿ ವಿವರಗಳ ಬಗ್ಗೆ ಸರ್ಕಾರ ಜಮೀನು ಕಬಳಿಕೆ ಬಗ್ಗೆ ನೀನೇ ಮನಬಿಚ್ಚಿ ಮಾತನಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.ಕುದುರೆ ಎಷ್ಟೇ ಚೆನ್ನಾಗಿ ರಥ ಓಡಿಸಿದರೂ ಚಾಟಿ ಏಟು ತಪ್ಪುವುದಿಲ್ಲ. ಚುನಾವಣೆಯಲ್ಲಿ ಮೈಸೂರಿನಿಂದ ಕೆಂಗೇರಿವರೆಗೂ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ, ನಿಮ್ಮ ಹೋರಾಟ ನಡೆಯುತ್ತದೆ. ಕೆಲವೆಡೆ ನಾವು ಗೆದ್ದಿದ್ದೇವೆ, ಕೆಲವೆಡೆ ನೀವು ಗೆದ್ದಿದ್ದೀರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾಮಾರಿದೆ, ನನ್ನ ಲೆಕ್ಕಾಚಾರ ವಿಫಲವಾಗಿ ನೀವು ಗೆದ್ದಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅವರು ಹೇಳಿರುವ ಪಾಠ ಕಲಿಯುತ್ತೇನೆ ಎಂದರು.
ನಾವು ಪಾದಯಾತ್ರೆ ಮಾಡುವುದಿಲ್ಲ. ಈ ರೀತಿ ಸಾರ್ವಜನಿಕ ಸಭೆ ಮಾಡಿ ಬಿಜೆಪಿ ನಾಯಕರನ್ನು ಪ್ರಶ್ನಿಸುತ್ತೇವೆ. ಬಿಜೆಪಿಯವರು ಬರೀ ಗದ್ದಲ ಮಾಡುತ್ತಾರೆ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ. ಕುಮಾರಸ್ವಾಮಿ ಅವರಿಗೆ ಸದನದಲ್ಲಿ ಡಿವಿಜಿ ಅವರ ಸಾಲುಗಳನ್ನು ಹೇಳಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನ ಉದ್ಧಾರವೆಷ್ಟಾಯ್ತೊ? ಮಂಕುತಿಮ್ಮ ಎಂದು ಹೇಳಿದ್ದೆ ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ಈ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ನಮ್ಮ ಜಿಲ್ಲೆ. ಕೆಂಪೇಗೌಡರು ಹುಟ್ಟಿದ, ಕಟ್ಟಿದ ನಾಡಿನವರು ನಾವು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಬಾಲಗಂಗಾಧರನಾಥ ಸ್ವಾಮಿಗಳು ಇಲ್ಲಿ ಜನಿಸಿದ್ದಾರೆ. ಇಲ್ಲಿನ ಜನ ನಾವು ಬೆಂಗಳೂರಿನವರು. ಈ ಭಾಗ ಬೆಂಗಳೂರಿನಿಂದ ಬೆಂಗಳೂರು ಗ್ರಾಮಾಂತರವಾಯಿತು. ಮತ್ತೆ ಬೆಂಗಳೂರು ವಿಭಾಗವಾಗಿದೆ. ನಮ್ಮ ಸ್ವಾಭಿಮಾನ ಬಿಟ್ಟುಕೊಡಲು ಸಾಧ್ಯವಿಲ್ಲ. ನೀವು ಇಲ್ಲಿ ಬಂದು ಜನರ ಮತಗಳ ಆಧಾರದ ಮೇಲೆ ಅಧಿಕಾರ ಮಾಡಿದ್ದೀರಿ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ದೇವೇಗೌಡರು ಪ್ರಧಾನಿಯಾದ ಜಾಗದಲ್ಲೇ ಸಿ.ಎಂ.ಲಿಂಗಪ್ಪನವರು ಗೆದ್ದಿರುವ ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಜನ ಏನುಬೇಕಾದರೂ ತೀರ್ಮಾನ ಮಾಡಲು ಅವಕಾಶವಿದೆ.
ಮೇಕೆದಾಟು ಅನುಮತಿ ಕೊಡಿಸುವುದಾಗಿ ಹೇಳಿದ್ದಲ್ಲ, ಏನಾಯ್ತು? :