ಚನ್ನಪಟ್ಟಣ: ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿ ಮುಖ್ಯಮಂತ್ರಿಯೂ ಆಗಿದ್ದ ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ. ಜನರ ಅಭಿವೃದ್ಧಿ ಕುರಿತು ಚಿಂತಿಸದ ಅವರು, ಈಗ ಉಪಚುನಾವಣೆಗೆ ಮಗನನ್ನು ತಂದು ನಿಲ್ಲಿಸಿದ್ದಾರೆ. ಅವರದು ಸ್ವಾರ್ಥ ರಾಜಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಆರೋಪ ಮಾಡಿದರು.
ತಾಲೂಕಿನ ಮಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ಕುಮಾರಸ್ವಾಮಿ ಈ ತಾಲೂಕಿಗೆ ಯಾಕೆ ಬಂದರೋ ಗೊತ್ತಿಲ್ಲ, ಯಾಕೆ ಬಿಟ್ಟುಹೋದರೋ ಗೊತ್ತಿಲ್ಲ. ಕುಮಾರಸ್ವಾಮಿಗೆ ಈ ಬಾರಿ ಕ್ಷೇತ್ರದಲ್ಲಿ ಜನವಿರೋಧಿ ಅಲೆ ಇದೆ. ಜನ ಈ ಬಾರಿಯ ಚುನಾವಣೆಯಲ್ಲಿ ಮನೆ ಮಗನನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಅದೇನೋ ಮನೆ ಕಟ್ಟಿಸಿ ಕೀ ಕೊಡುತ್ತೇನೆ ಅಂದಿದ್ದರಂತೆ. ಅಧಿಕಾರ ಇದ್ದಾಗಲೇ ಏನೂ ಮಾಡಿಲ್ಲ ಮುಂದೆ ಏನು ಮಾಡ್ತಾರೆ. ಅಳೋ ಗಂಡಸನ್ನ ನಂಬಬಾರದು ಅನ್ನೋ ಗಾದೆ ಇದೆ ಎಂದು ವಾಗ್ದಾಳಿ ನಡೆಸಿದರು.ಕುಮಾರಸ್ವಾಮಿ ಅವರಿಗೆ ಸಾಕಷ್ಟು ಕ್ಷೇತ್ರಗಳಿದೆ. ಅವರು ಮಂಡ್ಯ, ಹಾಸನ, ರಾಮನಗರ ಅಂತ ಎಲ್ಲಾ ಕಡೆ ಓಡಾಡ್ತಾರೆ. ಆದರೆ, ನನಗೆ ಇರುವುದು ಇದೊಂದೇ ಕ್ಷೇತ್ರ. ಚನ್ನಪಟ್ಟಣವೇ ನನ್ನ ಕರ್ಮಭೂಮಿ, ನಾನು ಇಲ್ಲೇ ಇರುತ್ತೇನೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಚನ್ನಪಟ್ಟಣಕ್ಕೆ ಇದು ವಿಶೇಷವಾದ ಸಂದರ್ಭ. ಈ ಉಪಚುನಾವಣೆಯಲ್ಲಿ ನನ್ನನ್ನ ಗೆಲ್ಲಿಸಿಕೊಡಿ. ಎಂತಹ ಸಂದರ್ಭದಲ್ಲೂ ಕೂಡ್ಲೂರು ಜನ ನನ್ನ ಕೈಬಿಟ್ಟಿಲ್ಲ. ನಮ್ಮ ಸರ್ಕಾರ ಇದೆ, ಕೂಡ್ಲೂರು ಅಭಿವೃದ್ಧಿಗೆ ಅವಕಾಶ ಬಂದಿದೆ. ಈ ಗ್ರಾಮದ ಜನತೆಗೆ ಮನೆ ಕೊಡುವ ಕೆಲಸ ಮಾಡ್ತೇವೆ. ನಿಮ್ಮ ಮನೆ ಮಕ್ಕಳಾಗಿ ಕೆಲಸ ಮಾಡಲು ನಾವು ಸಿದ್ದರಿದ್ದೇವೆ ಎಂದು ಭರವಸೆ ನೀಡಿದರು.ಕ್ಷೇತ್ರಕ್ಕೆ ಬಾರದ ಎಚ್‌ಡಿಕೆ: ಕುಮಾರಸ್ವಾಮಿ ಎರಡು ಬಾರಿ ಕ್ಷೇತ್ರದಿಂದ ಆಯ್ಕೆ ಆಗಿದ್ರು. ಒಂದು ಬಾರಿಯೂ ಕ್ಷೇತ್ರಕ್ಕೆ ಬರಲಿಲ್ಲ. ಅವರಿಗೆ ಕೂಡ್ಲೂರು ಎಲ್ಲಿದೆ ಅಂತ ಗೊತ್ತಿಲ್ಲ. ನಿಮ್ಮ ಮನೆಯ ಮಗ ಯೋಗೇಶ್ವರ್ ದಿನವೂ ನಿಮ್ಮ ಜೊತೆ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ನಿಮ್ಮ ಬೆಂಬಲವಿರಲಿ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದೆ. ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಕಾಂಗ್ರೆಸ್ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನಮ್ಮ ಪಕ್ಷದ ಶಾಸಕರೇ ಆಯ್ಕೆ ಆದಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಗೆಲ್ಲಿಸಿ ಎಂದು ಮನವಿ ಮಾಡಿದರು.ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನುಡಿದಂತೆ ನಡೆದಿದೆ. ಐದು ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಬಡವರ ಪರ ಯೋಜನೆಗಳು ಏನಾದರೂ ಜಾರಿಗೆ ಬಂದಿದ್ದರೆ, ಅದು ಕಾಂಗ್ರೆಸ್ ಅವಧಿಯಲ್ಲಿ ಮಾತ್ರ ಎಂದರು.
ಮೈಸೂರು ಎಂಪಿ ಕೂಡಾ ಬಂದು ಇಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡಿದ್ದಾರೆ. ಅವರು ಶ್ರೀಮಂತರು, ನೀವು ಬಡವರು. ನಿಮ್ಮ ಮನೆಮಗ ಸಿಪಿವೈಗೆ ಮತನೀಡಿ ಗೆಲ್ಲಿಸಿಕೊಡಿ. ಅವರು ನಿಮ್ಮ ಜತೆ ಇದ್ದು, ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಾರೆ ಎಂದರು.ಈ ವೇಳೆ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್ ಮುಂತಾದವರಿದ್ದರು.
ಬಾಕ್ಸ್..............ಸಿಪಿವೈ ಬಿರುಸಿನ ಪ್ರಚಾರ
ತಾಲೂಕಿನ ಮಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭಾನುವಾರ ಬಿರುಸಿನ ಪ್ರಚಾರ ನಡೆಸಿದರು. ಅವರಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಸಾಥ್ ನೀಡಿದರು. ಮಳೂರು ಜಿಪಂ ವ್ಯಾಪ್ತಿಯ ವಾಲೇತೋಪು, ಶ್ರೀರಾಮಪುರ, ಕೂಡ್ಲೂರು, ಎಸ್.ಎಂ.ದೊಡ್ಡಿ, ಎಸ್.ಎಂ.ಹಳ್ಳಿ, ಮಳೂರುಪಟ್ಟಣ, ಕುಕ್ಕೂರುದೊಡ್ಡಿ, ಚಕ್ಕೆರೆ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಹಲವು ಗ್ರಾಮಗಳಲ್ಲಿ ಅವರನ್ನು ಬೃಹತ್ ಹೂವಿನ ಹಾರಹಾಕಿ, ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.ಪೊಟೋ3ಸಿಪಿಟಿ1: ತಾಲೂಕಿನ ಮಳೂರು ಜಿಪಂ ವ್ಯಾಪ್ತಿಯ ಮಾರ್ಚನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪ್ರಚಾರ ನಡೆಸಿದರು. ಮಾಜಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನಾಯಕರು ಹಾಜರಿದ್ದರು.