ಅಭಿವೃದ್ಧಿಯ ಹರಿಕಾರರಾಗಿದ್ದ ಮನಮೋಹನ್‌ ಸಿಂಗ್‌

KannadaprabhaNewsNetwork |  
Published : Dec 28, 2024, 12:46 AM IST
32 | Kannada Prabha

ಸಾರಾಂಶ

ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದ ಖ್ಯಾತ ಆರ್ಥಿಕ ತಜ್ಞರು, ಅಭಿವೃದ್ಧಿಯ ಹರಿಕಾರರು, ರಾಜಕೀಯದ ಅಜಾತಶತ್ರುಗಳು, ಸಜ್ಜನ ಮುತ್ಸದ್ದಿಗಳೂ ಆಗಿದ್ದ ಡಾ. ಮನಮೋಹನ್ ಸಿಂಗ್‌ ಅವರು ಅಗಲಿದ್ದು ಅತೀವ ದುಃಖದ ಸಂಗತಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಅತ್ಯುನ್ನತ ಪದವಿ ಪಡೆದ ಡಾ. ಸಿಂಗ್‌ ರವರು ಪ್ರತಿಷ್ಠಿತ ಸೆಂಟ್‌ ಜಾನ್ಸ್‌ ಕಾಲೇಜಿನ ಫೆಲೋ ಆಗಿದ್ದರು. ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಮೂಲತಃ ಖ್ಯಾತ ಶಿಕ್ಷಣ ತಜ್ಞರು. ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ನಲ್ಲೂ ಅಧ್ಯಾಪನ ಮಾಡಿದ್ದರು.

ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಹಣಕಾಸು ಸಚಿವಾಲಯದ ಪ್ರಧಾನ ಸಲಹೆಗಾರರು, ಕಾರ್ಯದರ್ಶಿಗಳು, ಯೋಜನಾ ಆಯೋಗದ ಸದಸ್ಯರು, ರಿಸರ್ವ್ ಬ್ಯಾಂಕ್‌ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷರು. ಅಂದಿನ ಪ್ರಧಾನಿಗಳ ಆರ್ಥಿಕ ಸಲಹೆಗಾರರು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷರು - ಹೀಗೆ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಪ್ರತಿಮ ಪ್ರತಿಭಾವಂತರಾಗಿದ್ದರೂ ಅತ್ಯಂತ ಸರಳರು, ಸಜ್ಜನರು, ನಿಗರ್ವಿಗಳು, ವಿನೀತರು ಆಗಿದ್ದರು. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಪಿ.ವಿ. ನರಸಿಂಹರಾವ್‌ ಅವರ ಸಂಪುಟದಲ್ಲಿ ಅರ್ಥ ಸಚಿವರಾಗಿ ಜಾಗತೀಕರಣ, ಉದಾರೀಕರಣ ಮೊದಲಾದವುಗಳ ಹರಿಕಾರರಾಗಿ ಭಾರತದ ಆರ್ಥಿಕ ಚಿತ್ರಣವನ್ನೇ ಬದಲಾಯಿಸಿದವರು. ಹತ್ತು ವರ್ಷಗಳ ಕಾಲ ಪ್ರಧಾನಮಂತ್ರಿಗಳಾಗಿದ್ದರು. ರಾಷ್ಟ್ರದ ಹೆಮ್ಮೆಯ ಪುತ್ರರಾಗಿ ಸುಮಾರು ಆರೇಳು ದಶಕಗಳ ಕಾಲ ದೇಶ ಸೇವೆಗಾಗಿ ಮುಡುಪಾಗಿಟ್ಟುಕೊಂಡ ಧೀಮಂತರು.

ಡಾ. ಮನಮೋಹನ್ ಸಿಂಗ್‌ ಅವರು ಜೆಎಸ್‌ಎಸ್‌ ದಂತ ವೈದ್ಯಕೀಯ ಕಾಲೇಜಿನ ಕಟ್ಟಡದ ಭೂಮಿಪೂಜೆ ನೆರವೇರಿಸಿದುದು ಹಾಗೂ ಸುತ್ತೂರು ಶ್ರೀಕ್ಷೇತ್ರದಲ್ಲಿ ದಾಸೋಹ ಭವನ ಉದ್ಘಾಟಿಸಿದ್ದು ನಮ್ಮೆಲ್ಲರ ನೆನಪಿನಲ್ಲಿ ಚಿರಸ್ಥಾಯಿಯಾಗಿದೆ. ಡಾ. ಸಿಂಗ್‌ ಅವರು ಪಕ್ಷಗಳ ಚೌಕಟ್ಟನ್ನು ಮೀರಿ ಬೆಳೆದಿದ್ದರು. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುತ್ತಿದ್ದ ಧೀಮಂತ ಚೇತನ. ಕೇಂದ್ರ ಸರ್ಕಾರದ ಬಗ್ಗೆ ಈಗಲೂ ಕೆಲವು ಸಂದರ್ಭಗಳಲ್ಲಿ ಅವರು ವಸ್ತುನಿಷ್ಠವಾಗಿ ಪ್ರಶಂಸೆ ವ್ಯಕ್ತಪಡಿಸುದುದು ಅದಕ್ಕೆ ಸಾಕ್ಷಿ. ರಾಜಕೀಯದಲ್ಲಿ ಸಜ್ಜನಿಕೆಯ ಕೊಂಡಿಯಂತಿದ್ದ ಹಳೆಯ ತಲೆಮಾರಿನ ಈ ಹಿರಿಯರ ಅಗಲುವಿಕೆ ಒಂದು ನಿರ್ವಾತ ಸ್ಥಿತಿಯನ್ನು ನಿರ್ಮಿಸಿದೆ ಎಂಬುದು ನಿರ್ವಿವಾದ.

ದಿವಂಗತರ ಅಗಲುವಿಕೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಾ, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ವರ್ಗದವರು, ಬಂಧು ಮಿತ್ರರು ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಶ್ರೀಗಳು ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ