ಆ್ಯಂಬುಲೆನ್ಸ್‌ನಲ್ಲಿ ಬಂದಿಲ್ಲ, ಆರೋಗ್ಯವಾಗಿರುವೆ

KannadaprabhaNewsNetwork |  
Published : Nov 06, 2024, 12:34 AM IST
5ಕೆಆರ್ ಎಂಎನ್ 3.ಜೆಪಿಜಿಚನ್ನಪಟ್ಟಣ ಕ್ಷೇತ್ರದ ವಿರೂಪಾಕ್ಷಿಪುರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಇಲ್ಲಿಗೆ ನಾನು ಆ್ಯಂಬುಲೆನ್ಸ್‌ನಲ್ಲಿ ಬಂದಿಲ್ಲ, ವ್ಹೀಲ್ ಚೇರ್ ಮೇಲೂ ಬಂದಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಆರೋಗ್ಯವಾಗಿ ಚೆನ್ನಾಗಿದ್ದೇನೆ. ಅದನ್ನು ತೋರಿಸಲು ಇಲ್ಲಿಗೆ ಬಂದಿದ್ದೇನೆ. ನೀವೇ ನನ್ನನ್ನು ನೋಡುತ್ತಿದ್ದೀರಿ, ಹೇಗೆ ಇದ್ದೇನೆ ಎಂದು ಗಮನಿಸುತ್ತಿದ್ದೀರಿ ಅಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ: ಇಲ್ಲಿಗೆ ನಾನು ಆ್ಯಂಬುಲೆನ್ಸ್‌ನಲ್ಲಿ ಬಂದಿಲ್ಲ, ವ್ಹೀಲ್ ಚೇರ್ ಮೇಲೂ ಬಂದಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಆರೋಗ್ಯವಾಗಿ ಚೆನ್ನಾಗಿದ್ದೇನೆ. ಅದನ್ನು ತೋರಿಸಲು ಇಲ್ಲಿಗೆ ಬಂದಿದ್ದೇನೆ. ನೀವೇ ನನ್ನನ್ನು ನೋಡುತ್ತಿದ್ದೀರಿ, ಹೇಗೆ ಇದ್ದೇನೆ ಎಂದು ಗಮನಿಸುತ್ತಿದ್ದೀರಿ ಅಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಚನ್ನಪಟ್ಟಣ ಕ್ಷೇತ್ರದ ವಿರೂಪಾಕ್ಷಿಪುರ, ಕೊಡಂಬಹಳ್ಳಿ ಗ್ರಾಮಗಳಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ನನಗೆ ನಿಮ್ಮ ಆಶೀರ್ವಾದ ಇದೆ. ನಾನು ಶತಾಯುಷಿ ಆಗುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಅಂತೂ ಬದುಕಿರುತ್ತೇನೆ ಎನ್ನುವ ಭರವಸೆ ಹೊಂದಿದ್ದೇನೆ. ಅದು ನನ್ನ ಅಪ್ಪ ಬರೆದ ಜಾತಕ ಎಂದರು.ನನಗೆ ಮಂಡಿ ನೋವು, ನಿಂತುಕೊಂಡು ಮಾತಾಡೋಕೆ ಆಗಲ್ಲ. ನನಗೀಗ 92 ವರ್ಷ, ಎಸ್.ಎಂ. ಕೃಷ್ಣ ಮತ್ತು ನಾನು ಒಂದೇ ವಯಸ್ಸಿನವರು. ಆದರೆ ನಾವು ಈಗಲೂ ಕೆಲಸ ಮಾಡುತ್ತಿದ್ದೇವೆ. ದೇಹಕ್ಕೆ ವಯಸ್ಸಾಗುತ್ತದೆ, ಇಚ್ಛಾಶಕ್ತಿಗೆ ಅಲ್ಲ. ಕಾಂಗ್ರೆಸ್ ನಾಯಕರಿಗೆ ನನ್ನ ಆರೋಗ್ಯದ ಬಗ್ಗೆಯೇ ಚಿಂತೆಯಾಗಿದೆ ಎಂದು ಅತೀವ ನೋವು ವ್ಯಕ್ತಪಡಿಸಿದರು.ಕಾಂಗ್ರೆಸ್‌ ನಾಯಕರು ನನ್ನನ್ನು ಹೊರಗಿನವರು ಎನ್ನುತ್ತಿದ್ದಾರೆ. ನಾನು ಅವರಿಗೆ ಹೊರಗಿನವನು ಎಂದು ಈಗ ಅನ್ನಿಸುತ್ತಿದೆ. ಆದರೆ, ನಾನು ಈ ತಾಲೂಕಿಗೆ ಶಾಶ್ವತ ನೀರಾವರಿ ಒದಗಿಸಲು ಇಗ್ಗಲೂರು ಬ್ಯಾರೇಜ್ ಕಟ್ಟಿಸಿದಾಗ ಹಾಗೆಂದು ಅನಿಸಲಿಲ್ಲವೇ? ರಾಜಕೀಯಕ್ಕಾಗಿ ಕಾಂಗ್ರೆಸ್ ನಾಯಕರು ಜನರಿಗೆ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುದ್ದೆ ಸೊಪ್ಪಿನ ಸಾಂಬಾರು ಹಾಕಿ ಅಡುಗೆ ಮಾಡಿ ಬಡಿಸಿದ ತಾಯಂದಿರು ಇಲ್ಲಿದ್ದೀರಿ. ನಿಮ್ಮನ್ನು ನಾನು ಜೀವನದ ಕೊನೆ ಕ್ಷಣದ ತನಕ ಮರೆಯಲ್ಲ. ನಿಮ್ಮ ಪಾದಕ್ಕೆ ನಾನು ನಮಸ್ಕಾರ ಮಾಡುತ್ತೇನೆ. ನಾನು ಈ ತಾಲೂಕಿಗೆ ಏನೇನು ಮಾಡಿದ್ದೇನೆ, ಹೇಗೆಲ್ಲಾ ಶ್ರಮಪಟ್ಟು ಇಗ್ಗಲೂರು ಅಣೆಕಟ್ಟು ಕಟ್ಟಿದ್ದೇನೆ, ಆ ಬಗ್ಗೆ ನಾನು ಚರ್ಚೆ ಮಾಡಲ್ಲ. ಆದರೆ ಇಗ್ಗಲೂರು ಅಣೆಕಟ್ಟು ನಿಮ್ಮ ಮುಂದೆ ಇದೆ ಎಂದು ಹೇಳಿದರು.ನನ್ನ ಅರವತ್ತು ವರ್ಷದ ರಾಜಕಾರಣದಲ್ಲಿ ಇಂತಹ ಕೆಟ್ಟ ರಾಜಕಾರಣ ನಾನು ನೋಡಿಲ್ಲ. ನನ್ನೆಲ್ಲ ಯುವಕರು, ತಾಯಂದಿರು ಹಾಗೂ ಹಿರಿಯರಲ್ಲಿ ಕೇಳುತ್ತೇನೆ ಇಂತಹ ಕೆಟ್ಟ ರಾಜಕಾರಣ ರಾಜ್ಯದಲ್ಲಿ ಇರಬಾರದು. ಈ ಮಾತನ್ನು ನಾನು ಅಸೂಯೆ, ದ್ವೇಷದಿಂದ ಹೇಳುತ್ತಿಲ್ಲ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ಕೋಪ ಇಲ್ಲ. ವಿಪಕ್ಷ ನಾಯಕ ಮಾತನಾಡಿದರೆ ಹೇಗೆ ಗೌರವ ಕೊಡಬೇಕು ಅನ್ನೋದು ಗೊತ್ತಿಲ್ಲ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ನಾನು ‌11ನೇ ತಾರೀಕಿನ ವರೆಗೂ ಬರುತ್ತೇನೆ. ಮೊಮ್ಮಗನ ಗೆಲ್ಲಿಸೋಕೆ ಅಲ್ಲ. ನನಗೆ ಜೀವನದಲ್ಲಿ ಒಂದೇ ಒಂದು ಗುರಿ ಇದೆ. ನನ್ನ ಜನಕ್ಕೆ ಕುಡಿಯುವ ನೀರಿನ ವಿಚಾರದಲ್ಲಿ ತಮಿಳುನಾಡಿನವರು ಮೋಸ ಮಾಡಿದ್ದಾರೆ. ಆ ನೀರನ್ನು ಕೊಡುವ ತನಕ ಹೋರಾಟ ನಡೆಸುತ್ತೇನೆ. ಎನ್ ಡಿಎ ನಾಯಕರೆಲ್ಲರು ಸೇರಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ, ಟ್ಯಾಂಕರ್ ಮಾಫಿಯಾ ನಡೆಯುತ್ತಿದೆ. ಇನ್ನು ರೈತನ ಸ್ಥಿತಿ ಹೇಳಲಿಕ್ಕೆ ಆಗಲ್ಲ. ಅಡಿಕೆ, ತೆಂಗಿನ ತೋಟಗಳನ್ನು ನೋಡಿದರೆ ಕಣ್ಣೀರು ಬರುತ್ತದೆ. ನೀರಿದ್ದರೆ ಏನು ಬೇಕಾದರು ಮಾಡಬಹುದು. ನೀರಿನ ಶಕ್ತಿ ಏನಂತ ನನಗೆ ಗೊತ್ತಿದೆ. ಮೋದಿ ಅವರಿಗೂ ಅದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ದೇವೇಗೌಡ ತಿಳಿಸಿದರು.ಋಣಾನುಬಂಧವೋ ಏನೋ, ಈಗ ಯಾರ ಮನೆ ಅನ್ನ ತಿನ್ನುತ್ತೇನೆಯೋ ಗೊತ್ತಿಲ್ಲ. ಅನ್ನದ ಋಣ ಯಾರ ಮನೆಗೆ ಕರೆದುಕೊಂಡು ಹೋಗುತ್ತದೊ ಗೊತ್ತಿಲ್ಲ. ಮಾಧ್ಯಮದವರು ದೇವೇಗೌಡರು ಮಾತಾಡ್ತಾರಾ ಎಂದು ಕೇಳುತ್ತಿದ್ದರು. ದೇವೇಗೌಡ್ರು ಏನು ಇಂಟರ್ ನ್ಯಾಶನಲ್ ಅಪರಾಧಿ ಆಗಿದ್ನಾ? ಮೂರು ತಿಂಗಳು ನನ್ನ ಮನೆ ಮುಂದೆ ಇದ್ದರಲ್ಲ. ಇವತ್ತು ನಿಮ್ಮ ಮುಂದೆ ಎದೆ ಚಾಚಿ ಮಾತನಾಡುತ್ತಿದ್ದೇನೆ. ಇನ್ನೂ ನಾಲ್ಕಾರು ವರ್ಷ ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯಕ್ಕಾಗಿ ಬದುಕಿರುತ್ತೇನೆ. ಈ ಶರೀರ ಇರೋವರೆಗೆ ನನ್ನ ಜನರಿಗಾಗಿ ಹೋರಾಟ ಮಾಡಿ, ಕೊನೆ ಉಸಿರು ಬಿಡುತ್ತೇನೆ ಎಂದು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ದೇವೇಗೌಡರು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರನ್ನು ನರೇಂದ್ರ ಮೋದಿಯವರು ಕೇಂದ್ರದಲ್ಲಿ ಮಂತ್ರಿ ಮಾಡುವ ತೀರ್ಮಾನ ಮಾಡಿದ ಮೇಲೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದರು. ಅವರಿಂದ ಖಾಲಿಯಾಗಿರುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ಬಂದಿದೆ. ಆ ಸ್ಥಾನದಲ್ಲಿ ಯಾರು ನಿಲ್ಲಬೇಕೆಂದು ಗೊಂದಲ ಇತ್ತು. ಏನೇನು ನಡೆಯಿತು ಎನ್ನುವುದನ್ನು ಆರ್. ಅಶೋಕ್ ಎಳೆ ಎಳೆಯಾಗಿ ಹೇಳಿದ್ದಾರೆ‌. ಮತ್ತೆ ಬಿಡಿಸಿ ಹೇಳಬೇಕಿಲ್ಲ. ವ್ಯಕ್ತಿಯ ಗುಣಗಾನ ಮಾಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಪರೋಕ್ಷವಾಗಿ ಟಾಂಗ್ ನೀಡಿದರು.

ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸಚಿವರಾದ ಗೋಪಾಲಯ್ಯ, ಸಿ.ಎಸ್ .ಪುಟ್ಟರಾಜು, ಮಾಜಿ ಶಾಸಕರಾದ ಎ.ಮಂಜುನಾಥ್, ಕೆ.ಟಿ.ಶ್ರೀಕಂಠೇಗೌಡ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

5ಕೆಆರ್ ಎಂಎನ್ 3.ಜೆಪಿಜಿಚನ್ನಪಟ್ಟಣ ಕ್ಷೇತ್ರದ ವಿರೂಪಾಕ್ಷಿಪುರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!
ಬಂಗಾಳಕ್ಕೆ ದೀದಿ, ತಮಿಳ್ನಾಡಿಗೆ ಅಣ್ಣಾ, ಅಸ್ಸಾಂಗೆ ಮಾಮಾ, ಕೇರಳಕ್ಕೆ ದಾದಾ!