ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಸತ್ತಿನಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ಅವಮಾನ ಮಾಡಲಾಗುತ್ತಿದೆ. ಸಂವಿಧಾನ ಉಳಿವಿಗಾಗಿ ತಮ್ಮ ಸಹೋದರ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಗುಡುಗಿದರು.ನಗರದ ಸಿಪಿಎಡ್ ಮೈದಾನದಲ್ಲಿ ಮಂಗಳವಾರ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಹುಲ್ ಗಾಂಧಿ ಅವರು ಮಾತ್ರವಲ್ಲ, ನಾನಾಗಲಿ, ಇಲ್ಲಿರುವ ಯಾವ ನಾಯಕರೂ ಹೆದರುವ ಪ್ರಶ್ನೆಯೇ ಇಲ್ಲ ಎಂದ ಅವರು, ಗಾಂಧೀಜಿ, ನೆಹರೂ , ಅಂಬೇಡ್ಕರ ಅವರು ಅಹಿಂಸೆ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸಂವಿಧಾನ ಕೊಟ್ಟರು ಎಂದರು.ಬಿಜೆಪಿಯವರು ಸಂಸತ್ತಿನಲ್ಲೇ ಅಂಬೇಡ್ಕರ್, ಸಂವಿಧಾನಕ್ಕೆ ಅಪಚಾರ ಬಗೆಯುತ್ತಿದ್ದಾರೆ. ಕೇಂದ್ರ ಸಚಿವ ಅಮಿತ ಶಾ ಅವರು ಅಂಬೇಡ್ಕರ್ ಬಗ್ಗೆ ನಿಂದನೆ ಮಾಡಿದ್ದಾರೆ. ಸಂವಿಧಾನವನ್ನೂ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಸಚಿವರು ಸಂವಿಧಾನವನ್ನು ಕ್ಷೀಣಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂಬೇಡ್ಕರ್ ದೇವರ ಸಮಾನ ಪುರುಷ. ಅವರ ಬಗ್ಗೆ ಕೇಂದ್ರ ಗೃಹ ಸಚಿವರೇ ನಿಂದಿಸುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೂ ಅವಮಾನ ಮಾಡಿದ್ದಾರೆ. ಅಲ್ಲದೇ, ಆರ್‌ಎಸ್‌ಎಸ್ ಸೇರಿದಂತೆ ಅದರ ಅಂಗಸಂಸ್ಥೆಗಳು ಅಂಬೇಡ್ಕರ್ ಅವರ ಪ್ರತಿಮೆ ಸುಟ್ಟುಹಾಕಿದವು. ಬಿಜೆಪಿ ವಿಧಾರಧಾರೆ ಅದೇ ಆಗಿದೆ. ಸಂವಿಧಾನ ಬದಲಿಸುತ್ತೇವೆ ಎನ್ನುವವರಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.ಸಂವಿಧಾನ ಸರಿ ಇಲ್ಲ. ಅಶೋಭವಾಗಿದೆ ಎನ್ನುತ್ತಿದ್ದ ಬಿಜೆಪಿಗರು ಮೊದಲ ಬಾರಿ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನ ಮಿಮರ್ಶೆ ಸಮಿತಿ ರಚಿಸಿದರು. ಸಾಮಾಜಿಕ ನ್ಯಾಯದ ವಿರುದ್ಧ ಹೇಳಿಕೆ ಕೊಟ್ಟರು. ನ್ಯಾಯಾಂಗ ವ್ಯವಸ್ಥೆಯನ್ನು ಕ್ಷೀಣಿಸುವ ಕೆಲಸ ಮಾಡಿದೆ. ಮಾಹಿತಿ ಹಕ್ಕು ಕಾಯ್ದೆ ರದ್ದುಗೊಳಿಸುವ ಪ್ರಯತ್ನಿಸಿ, ನಿಮ್ಮೆಲ್ಲರ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾನೂನು ಕಾಯ್ದೆ ಬದಲಾವಣೆ ಮಾಡಿ, ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ. ಲೋಕಪಾಲ ಕಾಯ್ದೆ ಕುಗ್ಗಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಶಕ್ತಿಯನ್ನೂ ಇಲ್ಲದಂತೆ ಮಾಡಿದ್ದಾರೆ. ಬಿಜೆಪಿಯ ಎಲ್ಲ ನೀತಿಗಳು ಸಂವಿಧಾನ ವಿರೋಧಿಯಾಗಿವೆ ಎಂದು ಟೀಕಿಸಿದರು.ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿ, ಆರ್‌ಎಸ್‌ಎಸ್ ಸಂವಿಧಾನ ವಿರೋಧಿಯಾಗಿವೆ. ಭಾರತದ ಸಂವಿಧಾನಕ್ಕೆ ಆಪತ್ತು ಎದುರಾಗಿದೆ. ಸಂವಿಧಾನ ಸಂರಕ್ಷಣೆ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಸಂವಿಧಾನ ರಕ್ಷಣೆಗಾಗಿ ನಾವೆಲ್ಲರೂ ಹೋರಾಡಬೇಕಿದೆ. ಬಿಜೆಪಿ, ಆರ್‌ಎಸ್‌ಎಸ್‌ನವರೂ ದಲಿತ ವಿರೋಧಿಗಳು. ಹಿಂದು ವಿರೋಧಿಗಳು. ಬಡವರು, ರೈತರು, ಕೂಲಿಕಾರ್ಮಿಕರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಆರ್‌ಎಸ್‌ಎಸ್ ಯಾವಾಗಲೂ ತಮ್ಮ ಕಚೇರಿ ಮೇಲೆ ಭಾರತ ಧ್ವಜ ಹಾರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.ದೇಶಕ್ಕಾಗಿ ಬಿಜೆಪಿ ಹೋರಾಟ ಮಾಡಲ್ಲ. ಅಧಿಕಾರಕ್ಕಾಗಿ ಹೋರಾಟ ಮಾಡುತ್ತದೆ. ಪ್ರತಿ ಮಸೀದಿ ಕೆಳಗಡೆ ಶಿವಲಿಂಗ ಹುಡುಕಬೇಕಾಗಿಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ ಇವರು ಹಿಂದು -ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಒಂದು ಸಂದೇಶ ಕೊಟ್ಟರು. ನೀವು ಹೊಡೆದರೂ ನಾವು ಕೈ ಎತ್ತಲ್ಲ ಎಂದರು. ಹಿಂಸೆಗೆ ಪ್ರತಿಯಾಗಿ ಅಹಿಂಸೆ ಸಂದೇಶ ನೀಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ 7.8 ಜಿಡಿಪಿ ಬೆಳವಣಿಗೆ ಇತ್ತು. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞ. ಆರ್ಟಿಐ ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿ ಮಾಡಿತ್ತು. ಬಡವರಿಗಾಗಿ ಅನೇಕ ಯೋಜನೆಯನ್ನು ಕಾಂಗ್ರೆಸ್ ಜಾರಿಗೆ ತಂದಿತು. ಈ ರೀತಿಯ ಕಾರ್ಯಕ್ರಮಗಳನ್ನು ಎನ್‌ಡಿಎ ಜಾರಿಗೊಳಿಸಿದ್ದಾರಾ? ಬಿಜೆಪಿಯವರು ನಾವು ದಲಿತರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆವು ಎಂದು ಹೇಳಬಹುದು. ಆದರೆ, ಬಿಜೆಪಿಯವರು, ಆರ್‌ಎಸ್‌ಎಸ್‌ನವರು, ಹಿಂದು ಮಹಾಸಭಾದವರು ಯಾವತ್ತಿದ್ದರೂ ದಲಿತ ವಿರೋಧಿಗಳು. ಅವರು ಎಂದಿಗೂ ದಲಿತರ ಪರ ಇರಲಿಲ್ಲ ಎಂದು ಟೀಕಿಸಿದರು.ಸೋನಿಯಾ ಗಾಂಧಿ ತಮಗೆ ಬಂದಿದ್ದ ಪ್ರಧಾನಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದರು. ತಮ್ಮ ಬದಲು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ತ್ಯಾಗ ಮಾಡಿದರು. ನಾವು ಈ ರೀತಿಯ ತ್ಯಾಗ ಮಾಡಲು ಸಾಧ್ಯವಾ? ನಾವು ಕೊಟ್ಟ ಯೋಜನೆಯನ್ನು ಟೀಕೆ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಬಡವರ ಪರ ಪಕ್ಷ. ಇಂದಿರಾ ಗಾಂಧಿ 10 ಅಂಶಗಳ ಯೋಜನೆ ಜಾರಿ ಮಾಡಿದ್ದಾರೆ ಎಂದು ಖರ್ಗೆ ಹೇಳಿದರು.