ಬೆಳೆ ಕೈ ಬಿಟ್ಟು ಶಾಸಕರ ಖರೀದಿ ಕೇಂದ್ರ ತೆರೆದ್ರು

KannadaprabhaNewsNetwork |  
Published : Nov 25, 2025, 01:30 AM IST
24ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ ಅಂತಾ ಹೇಳಿದರೆ ಶಾಸಕರ ಖರೀದಿ ಕೇಂದ್ರ ತೆರೆದಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉಲ್ಬಣಿಸುತ್ತಿರುವ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆ ವ್ಯಂಗ್ಯವಾಡಿದ್ದಾರೆ.

- ಕಬ್ಬಿಗೆ ದರ ನಿಗದಿಪಡಿಸಿ ಅಂದ್ರೆ ಮೆಟೀರಿಯಲ್‌, ಗ್ರೇಡ್ ಮೇಲೆ ಶಾಸಕರ ರೇಟ್: ಮಾಜಿ ಸಚಿವ ಸಿ.ಟಿ.ರವಿ ಲೇವಡಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ ಅಂತಾ ಹೇಳಿದರೆ ಶಾಸಕರ ಖರೀದಿ ಕೇಂದ್ರ ತೆರೆದಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉಲ್ಬಣಿಸುತ್ತಿರುವ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆ ವ್ಯಂಗ್ಯವಾಡಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಎಫ್ಆರ್‌ಪಿ ನಿಗದಿಪಡಿಸಿ ಅಂದ್ರೆ ಶಾಸಕರಿಗೆ ಎಫ್ಆರ್‌ಪಿ ಫಿಕ್ಸ್ ಮಾಡುತ್ತಿದ್ದೀರಿ. ಅದು ಮೆಟೀರಿಯಲ್ ಮೇಲೆ, ಗ್ರೇಡ್ ಮೇಲೆ ಶಾಸಕರ ರೇಟ್ ಡಿಪೆಂಡ್ ಆಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 14-15 ಪ್ರಭಾವಿ ನಾಯಕರ ಸಕ್ಕರೆ ಕಾರ್ಖಾನೆಗಳಿವೆ. ಕೇಂದ್ರ ಸರ್ಕಾರವು ₹3550 ಎಫ್‌ಆರ್‌ಪಿ ನಿಗದಿಪಡಿಸಿದೆ. ನಮ್ಮ ಪಕ್ಷದ ಸಕ್ಕರೆ ಕಾರ್ಖಾನೆ ಮಾಲೀಕರು ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್‌ಪಿ ನೀಡಲಿಲ್ಲವೆಂದರೆ ಮೂಗು ಹಿಡಿದು ಮಾಡಿಸಲಿ. ಯಾವುದೇ ಸಕ್ಕರೆ ಕಾರ್ಖಾನೆ ದರ ನೀಡಲ್ಲ ಅಂದರೆ ಟೇವರ್ ಮಾಡುವ ಕೆಲಸ ಸರ್ಕಾರ ಮಾಡಬೇಕು ಎಂದರು.

ರಾಜ್ಯದಲ್ಲಿ ನಾವು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರೈತರ ಪರ ಹೋರಾಟ ಮಾಡುತ್ತೇವೆ. ಸರ್ಕಾರವನ್ನು ಎಚ್ಚರಿಸಲು ಮೊದಲು 2 ಹಂತದ ಹೋರಾಟ ಮಾಡುತ್ತೇವೆ ಎಂದರು. ದಾವಣಗೆರೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರಾ ಎಂಬ ಪ್ರಶ್ನೆಗೆ, ಎಲ್ಲ ಗೊತ್ತಿದೆ ನಿಮಗೆ. ನಾನು ಅದರ ಬಗ್ಗೆ ಕಾಮೆಂಟ್ ಮಾಡೋಕೆ ಬಯಸುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡೇ ಹೋರಾಟ ಮಾಡುತ್ತೇವೆ ಎಂದಷ್ಟೇ ತಿಳಿಸಿದರು.

ವಿಧಾನಸಭೆವಾರು, ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ:

ರಾಜ್ಯಾದ್ಯಂತ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನ.27 ಮತ್ತು 28ರಂದು ರೈತಪರ ಹೋರಾಟ ಹಮ್ಮಿಕೊಂಡಿದೆ. ಡಿ.1 ಮತ್ತು 2ರಂದು ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಹೋರಾಟ ನಡೆಯಲಿದೆ. ಕಣ್ಣು ಬಿಡಿ, ಕಿವಿಯ ಕೊಡಿ, ರೈತರ ಸಮಸ್ಯೆ ಕಡೆ ಗಮನ ಕೊಡಿ ಘೋಷವಾಕ್ಯದಡಿ ನಮ್ಮ ಹೋರಾಟ ನಡೆಯಲಿದೆ ಎಂದು ಸಿ.ಟಿ.ರವಿ ಹೇಳಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಹಿನ್ನೆಲೆ ಡಿ.8ರಂದು ರಾಜ್ಯದ ರೈತರ ಸಂಘಟನೆ ಮಾಡಿ, ವಿಧಾನಸಭೆ ಚಲೋ ಹೋರಾಟಕ್ಕೆ ನಿರ್ಧಾರ ಮಾಡಿದ್ದೇವೆ. ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಲು ನ.25ರಂದು ದಾವಣಗೆರೆಯಿಂದಲೇ ಹೋರಾಟವನ್ನು ಆರಂಭಿಸಲಿದ್ದೇವೆ. ಈಗಾಗಲೇ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ₹2400 ದರ ನಿಗದಿಪಡಿಸಿದೆ. ನ.12ರಂದೇ ಖರೀದಿ ಕೇಂದ್ರ ತೆರೆಯಲು ರಾಜ್ಯಕ್ಕೆ ಕೇಂದ್ರ ಸರ್ಕಾರ ಸುತ್ತೋಲೆ ಕಳಿಸಿದೆ. ದುರ್ದೈವ ಅಂದರೆ ರಾಜ್ಯ ಸರ್ಕಾರ ಇದುವರೆಗೂ ಖರೀದಿ ಕೇಂದ್ರಗಳನ್ನೇ ತೆರೆದಿಲ್ಲ ಎಂದು ಕಿಡಿಕಾರಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ, ಪಾಲಿಕೆ ಮಾಜಿ ಸದಸ್ಯ ಮಂಜಾನಾಯ್ಕ, ಕೋಶಾಧ್ಯಕ್ಷ ಪಿ.ಸಿ. ಶ್ರೀನಿವಾಸ ಭಟ್, ರಘು ಅಂಬರಕರ್, ಎಚ್.ಪಿ.ವಿಶ್ವಾಸ್‌ ಇತರರು ಇದ್ದರು.

- - -

(ಕೋಟ್‌) ಹುಬ್ಬಳ್ಳಿ, ಉದಯಗಿರಿ ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿದವರ ಕೇಸ್ ವಾಪಸ್‌ ಪಡೆದಿದ್ದೀರಿ. ಆದರೆ, ರೈತರು, ಕಾರ್ಮಿಕರು, ರೈತರ ಮಹಿಳೆಯರು, ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ನೀಡುತ್ತೇವೆಂದಿದ್ದಿರಿ. ತುಂಗಭದ್ರಾ ನದಿ, ಡ್ಯಾಂ ಹೂಳೆತ್ತುತ್ತೇವೆಂದಿದ್ದಿರಿ. ಆದರೆ, ಅದೇ ಡ್ಯಾಂ ಗೇಟ್‌ ಇವೆಲ್ಲವನ್ನೂ ಸೇರಿಸಿ, ಶ್ವೇತಪತ್ರ ಹೊರಡಿಸುವಂತೆ ನಾವು ಒತ್ತಾಯಿಸುತ್ತೇವೆ. ರಾಜ್ಯಾದ್ಯಂತ ರೈತರನ್ನು ಸಂಘಟಿಸಿ, ಹೋರಾಟ ಮಾಡುತ್ತೇವೆ.

- ಸಿ.ಟಿ.ರವಿ, ವಿಪ ಸದಸ್ಯ, ಬಿಜೆಪಿ ಮುಖಂಡ.

- - - (ಟಾಪ್‌ ಕೋಟ್‌)ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುವ ಕುರಿತು ಹೇಳಲು ನಾನು ಜ್ಯೋತಿಷಿಯಲ್ಲ. ಇವತ್ತೇ ಚುನಾವಣೆ ನಡೆದರೂ ಕಾಂಗ್ರೆಸ್ ಸರ್ಕಾರ ಸೋಲಲಿದೆ. ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಮಾಡದಷ್ಟೂ ಸಾಮರ್ಥ್ಯವಿಲ್ಲದ ದುರ್ಬಲ ಸರ್ಕಾರ ಇದು. ದಲಿತ ಮುಖ್ಯಮಂತ್ರಿ, ಸಿದ್ದರಾಮಯ್ಯ ಐದು ವರ್ಷ ಸಿಎಂ, ಡಿಕೆಶಿಗೆ ಮಾತು ಕೊಟ್ಟಿದೆ ಎಂದೆಲ್ಲಾ ಚರ್ಚೆಯನ್ನೆಬ್ಬಿಸಿ, ಜನರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಾರೆ.

- ಸಿ.ಟಿ.ರವಿ, ಬಿಜೆಪಿ ಮುಖಂಡ, ವಿಪ ಸದಸ್ಯ

- - -

-24ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?