ಕನ್ನಡಪ್ರಭ ವಾರ್ತೆ ಬೆಂಗಳೂರು
ದುಷ್ಕರ್ಮಿಗಳಿಬ್ಬರು ಗ್ರಾಹಕರ ಸೋಗಿನಲ್ಲಿ ದಿನಸಿ ಅಂಗಡಿಗೆ ತೆರಳಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಗಲ್ಲಾಪೆಟ್ಟಿಗೆಯಲ್ಲಿದ್ದ ₹1.86 ಲಕ್ಷವನ್ನು ಎಗರಿಸಿ ಪರಾರಿ ಆಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹನುಮಂತನಗರದ 10ನೇ ಮುಖ್ಯರಸ್ತೆಯ ಪಾಶ್ವನಾಥ ಪ್ರಾವಿಜನ್ ಸ್ಟೋರ್ ಹೆಸರಿನ ದಿನಸಿ ಅಂಗಡಿಯಲ್ಲಿ ಜ.22ರಂದು ಬೆಳಗ್ಗೆ 9.50ರ ಸುಮಾರಿಗೆ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ಪುನೀತ್ ಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:ದೂರುದಾರ ಪುನೀತ್ ಕುಮಾರ್ ಮತ್ತು ಅವರ ಸ್ನೇಹಿತ ಸುರೇಶ್ ದೂತ್ ಪಾಲುದಾರಿಕೆಯಲ್ಲಿ ಆರು ತಿಂಗಳ ಹಿಂದೆ ಈ ದಿನಸಿ ಅಂಗಡಿ ಪ್ರಾರಂಭಿಸಿದ್ದರು. ಜ.22ರಂದು ಬೆಳಗ್ಗೆ ಪಾಲುದಾರ ಸುರೇಶ್ ದೂತ್ ಪುತ್ರ ಜನಕ್ ದೂತ್ ಅಂಗಡಿ ಬಾಗಿಲು ತೆರೆದು ವ್ಯಾಪಾರದಲ್ಲಿ ತೊಡಗಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಅಂಗಡಿ ಎದುರು ದ್ವಿಚಕ್ರ ವಾಹನ ನಿಲುಗಡೆ ಮಾಡಿದ್ದಾರೆ. ಬಳಿಕ ಒಬ್ಬ ಅಂಗಡಿಗೆ ಬಂದು ಉಪ್ಪಿನಕಾಯಿ ಬಾಟಲ್ ತೆಗೆದುಕೊಂಡು ಹೋಗಿದ್ದಾನೆ. ನಂತರ ಮತ್ತೊಬ್ಬ ಬಂದು ಜಾಮ್ ಬಾಟಲ್ ತೆಗೆದುಕೊಂಡು ಹೋಗಿದ್ದಾನೆ.
ಕೆಲ ನಿಮಿಷದ ಬಳಿಕ ಮೊದಲು ಬಂದಿದ್ದ ವ್ಯಕ್ತಿ ಮತ್ತೆ ಅಂಗಡಿಗೆ ಬಂದು ಕೆಲ ವಸ್ತುಗಳನ್ನು ಕೊಡು ಎಂದು ಜನಕ್ ದೂತ್‌ನನ್ನು ಕರೆದಿದ್ದಾನೆ. ಜನಕ್ ದೂತ್ ವಸ್ತುಗಳನ್ನು ಕೊಡಲು ಒಳಗೆ ಹೋದಾಗ, ಮತ್ತೊಬ್ಬ ವ್ಯಕ್ತಿ ಅಂಗಡಿಯ ಗಲ್ಲಾಪೆಟ್ಟಿಗೆ ಬಳಿ ಬಂದು ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಕೆಲ ನಿಮಿಷದ ಬಳಿಕ ಜನಕ್ ಗಲ್ಲಾಪೆಟ್ಟಿಗೆ ನೋಡಿಕೊಂಡಾಗ ₹1.86 ಲಕ್ಷ ಇಲ್ಲದಿರುವುದು ಕಂಡು ಬಂದಿದೆ. ಬಳಿಕ ನಡೆದ ವಿಷಯವನ್ನು ಅಂಗಡಿ ಮಾಲೀಕ ಪುನೀತ್‌ಗೆ ತಿಳಿಸಿದ್ದಾರೆ.ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದಿದ್ದ ಆ ಇಬ್ಬರು ಅಪರಿಚಿತರೇ ಹಣವನ್ನು ಕದ್ದಿರುವ ಅನುಮಾನ ವ್ಯಕ್ತಪಡಿಸಿ, ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.