)
ಹರಿಹರ: ಸಹ ಶಿಕ್ಷಕರು ಹಾಗೂ ಸಿಬ್ಬಂದಿಯ ನಿರಂತರ ಮಾನಸಿಕ ಕಿರುಕುಳ ಮತ್ತು ಜಾತಿನಿಂದನೆ ತಾಳಲಾರದೆ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಜಯಪ್ಪ ಶಾಲೆಯಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಬಗ್ಗೆ ಅವರ ಪತ್ನಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ನನ್ನ ಪತಿ ಶಾಲೆಯಲ್ಲಿ ದಾಖಲಾತಿ, ಅಕ್ಷರದಾಸೋಹ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು. ಆದರೆ, ಇದನ್ನು ಸಹಿಸದ ಶಾಲೆಯ ಸಹ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಭೋವಿ ಜಾತಿಗೆ ಸೇರಿದವನು ಎಂದು ಕೀಳಾಗಿ ಕಂಡು ಜಾತಿನಿಂದನೆ ಮಾಡುತ್ತಿದ್ದರು.
ನಾವೆಲ್ಲರೂ ಹೇಳಿದ ಹಾಗೆ ಕೇಳಬೇಕು, ಇಲ್ಲದಿದ್ದರೆ ಬಿಇಒ ಅವರಿಗೆ ದೂರು ನೀಡಿ ಕೆಲಸದಿಂದ ಕಿತ್ತು ಹಾಕಿಸುತ್ತೇವೆ'''''''' ಎಂದು ಬೆದರಿಕೆ ಹಾಕುತ್ತಿದ್ದರು. ಈ ನಿರಂತರ ಕಿರುಕುಳ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪತ್ನಿ ಅಂಜಿನಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.ದೂರಿನ ಅನ್ವಯ ಕೊಕ್ಕನೂರು ಶಾಲೆಯ ಸಹ ಶಿಕ್ಷಕರಾದ ಶ್ರೀಕಾಂತ ಚಾರಿ, ವೆಂಕಟೇಶ, ರಜನಿ, ಚೇತನ ಕೆ.ಟಿ., ಮಹಾಂತೇಶ ಗೌಳಿ, ಅಡುಗೆ ಸಿಬ್ಬಂದಿಯವರಾದ ಸುಮಾ, ಚಂದ್ರಮ್ಮ, ವಿಜಯಮ್ಮ, ರೂಪಾ ಹಾಗೂ ಸಿಆರ್‌ಪಿ ಮತ್ತು ಬಿಆರ್‌ಪಿ ಸಿಬ್ಬಂದಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ಮಲೇಬೆನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.