ಹಾವೇರಿ: ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಇಲ್ಲಿಯ ನಗರಸಭೆ ಕೈಗೊಂಡಿರುವ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಾಚರಣೆ ಪರಿಣಾಮಕಾರಿಯಾಗಿ ಸಾಗುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ 250ಕ್ಕೂ ಅಧಿಕ ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ನಗರಸಭೆಯ ಪೌರಕಾರ್ಮಿಕರು ಪ್ರತಿದಿನ ಬೆಳಗಿನ ಜಾವ ವಿವಿಧ ವಾರ್ಡ್‌ಗಳು, ಪ್ರಮುಖ ರಸ್ತೆ, ಬಸ್ ನಿಲ್ದಾಣ, ಜನವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳನ್ನು ಸುರಕ್ಷಿತವಾಗಿ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಸಾಗಿಸುತ್ತಿದ್ದಾರೆ. ಅಲ್ಲಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ, ಅಗತ್ಯ ಉಪಚಾರ ನೀಡುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಇಲ್ಲಿಯ ಗುತ್ತಲ ರಸ್ತೆ ಎಪಿಎಂಸಿ ಆವರಣದಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆಂದೇ ಪ್ರತ್ಯೇಕ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಅಲ್ಲಿ ಸೆರೆಹಿಡಿದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ಬಳಿಕ ನಾಯಿಗಳನ್ನು ಕೆಲವು ದಿನಗಳ ಕಾಲ ಪುನರ್ವಸತಿ ಕೇಂದ್ರದಲ್ಲೇ ಆರೈಕೆ ಮಾಡಲಾಗುತ್ತಿದೆ. ಆರೋಗ್ಯ ಸ್ಥಿತಿ ಸುಧಾರಿಸಿರುವುದನ್ನು ಖಚಿತಪಡಿಸಿಕೊಂಡ ನಂತರ, ಅವುಗಳನ್ನು ಹಿಡಿದ ಸ್ಥಳದಲ್ಲೇ ಮತ್ತೆ ಬಿಡಲಾಗುತ್ತಿದೆ. ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಂಪೂರ್ಣ ಪ್ರಕ್ರಿಯೆ ಅನುಷ್ಠಾನಗೊಳ್ಳುತ್ತಿದೆ.

ಪೌರಕಾರ್ಮಿಕರಿಂದಲೇ ಕಾರ್ಯಾಚರಣೆ: ನಗರಸಭೆಯ ಈ ನಿರಂತರ ಕಾರ್ಯಾಚರಣೆ ಬಳಿಕನೂ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಸಾಕಷ್ಟಿದೆ ಎಂಬ ದೂರುಗಳಿವೆ. ಈ ಹಿಂದೆಲ್ಲ ವಿಶೇಷ ಕಾರ್ಯಾಚರಣೆ ನಡೆಸಲು ಪ್ರತ್ಯೇಕ ತಂಡಕ್ಕೆ ಗುತ್ತಿಗೆ ನೀಡಲಾಗುತ್ತಿತ್ತು. ಆ ತಂಡ ಸೆರೆ ಹಿಡಿದ ನಾಯಿಗಳನ್ನು ಬೇರೆಲ್ಲೋ ಸ್ಥಳಾಂತರ ಮಾಡುತ್ತಿತ್ತು. ಆದರೆ, ನ್ಯಾಯಾಲಯದ ಆದೇಶದ ಮೇರೆಗೆ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಮತ್ತೆ ಅದೇ ಜಾಗಕ್ಕೆ ಬಿಟ್ಟು ಬರಬೇಕಿದೆ. ಇರುವ ಪೌರಕಾರ್ಮಿಕರೇ ಈ ಕೆಲಸವನ್ನೂ ಮಾಡಬೇಕಿದೆ. ಚರಂಡಿ ಸ್ವಚ್ಛತೆ, ನಿತ್ಯ ಬೆಳಗ್ಗೆ ಮನೆಮನೆ ಕಸ ಸಂಗ್ರಹ, ತ್ಯಾಜ್ಯ ವಿಲೇವಾರಿ ಇತ್ಯಾದಿ ಕೆಲಸದ ಒತ್ತಡದ ನಡುವೆಯೂ ಪೌರಕಾರ್ಮಿಕರು ಬೀದಿನಾಯಿಗಳನ್ನು ಸೆರೆಹಿಡಿಯುವ ಕೆಲಸವನ್ನೂ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಕಾರ್ಯಾಚರಣೆ ಬಂದಾಗ ಕೆಲವು ಸಿಕ್ಕರೆ, ಹಲವು ಓಡಿ ತಪ್ಪಿಸಿಕೊಳ್ಳುತ್ತವೆ. ಒಂದೆರಡು ನಾಯಿ ಹಿಡಿಯುವಷ್ಟರಲ್ಲಿ ಹತ್ತಾರು ನಾಯಿಗಳು ಓಡಿ ಹೋಗುತ್ತಿವೆ. ಇದರಿಂದ ಕಾರ್ಯಾಚರಣೆಗೆ ಸ್ವಲ್ಪ ತೊಡಕಾಗಿದೆ.

ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಯಂತೆ ಬೀದಿನಾಯಿಗಳನ್ನು ಹಿಡಿದು ಪುನರ್ವಸತಿ ಕೇಂದ್ರದಲ್ಲಿಟ್ಟು ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ನಡೆಸಿ ಸುರಕ್ಷಿತವಾಗಿ ಅದೇ ಜಾಗದಲ್ಲಿ ಬಿಟ್ಟು ಬರುವ ಕಾರ್ಯವನ್ನು ನಮ್ಮ ಪೌರಕಾರ್ಮಿಕರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಇದರಿಂದ ಬೀದಿ ನಾಯಿಗಳ ಹಾವಳಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಹಂತ ಹಂತವಾಗಿ ಕಾರ್ಯಾಚರಣೆ ಮುಂದುವರಿಸಿ ಇನ್ನಷ್ಟು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ನಗರಸಭೆ ಕ್ರಮ ಕೈಗೊಂಡಿದೆ ಎಂದು ಹಾವೇರಿ ಪೌರಾಯುಕ್ತ ಕಾಂತರಾಜು ಎಚ್‌. ಹೇಳಿದರು.