ಪರಿಷತ್‌ನಲ್ಲಿ ಸದಸ್ಯ ವೈ.ಎಂ. ಸತೀಶ್ ಧ್ವನಿ
ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಮತ್ತು ನಿರಾಮಯ ಆರೋಗ್ಯ ವಿಮಾ ಯೋಜನೆ ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಕರ್ನಾಟಕದಲ್ಲಿ ಅಂಗವಿಕಲರಿಗೆ ಸರ್ಕಾರ ನೀಡುವ ಆರೋಗ್ಯ ಮತ್ತು ವಿಮಾ ಯೋಜನೆಗಳ ಕುರಿತು ವಿಧಾನಸೌಧದ ಮೇಲ್ಮನೆಯಲ್ಲಿ ಶುಕ್ರವಾರ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.ಅಂಗವಿಕಲತೆ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಅಡಿ ಶಸ್ತ್ರಚಿಕಿತ್ಸೆಯಿಂದ ವಿಕಲಚೇತನತೆ ನಿವಾರಣೆ ಮಾಡಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎಲ್ಲ ಸರ್ಕಾರಿ ಆಸ್ಪತ್ರೆಗಳು ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ₹1 ಲಕ್ಷ ವರೆಗೆ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆ ಕಳೆದ 25 ವರ್ಷಗಳ ಹಿಂದಿನಿಂದಲೂ ಜಾರಿಯಲ್ಲಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಸಿ ಗುರುತು ಹಚ್ಚಿದ ತೀವ್ರತರವಾದ ಅಥವಾ ಗಂಭೀರ ಸ್ವರೂಪದ ಶ್ರವಣದೋಷವುಳ್ಳ 6 ವರ್ಷದ ಕೆಳಗಿನ ಮಕ್ಕಳಿಗೆ ಶ್ರವಣ ಸಾಧನೆಗಳನ್ನು ನೀಡಿ ಟ್ರಯಲ್ ಆಡಿಟರಿ ವರ್ಬಲ್ ಥೆರಪಿ ಒದಗಿಸಲಾಗುವುದು.
ದೇಶದಲ್ಲೇ ಪ್ರಥಮ ಬಾರಿಗೆ ಅಂಗವಿಕಲ ಮಕ್ಕಳ ಪೋಷಕರಿಗೆ ತಲಾ ₹1 ಸಾವಿರ ಗೌರವಧನವನ್ನು ರಾಜ್ಯ ಸರ್ಕಾರ ಪಾವತಿಸುತ್ತಿರುವುದು ಶ್ಲಾಘನೀಯ. ಈ ಮೊತ್ತವನ್ನು ಹೆಚ್ಚಿಸಬೇಕು. ವಿಮಾ ಸೌಲಭ್ಯವು ₹1 ಲಕ್ಷಗಳಿಂದ ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ವೈ.ಎಂ. ಸತೀಶ್ ಸದನದಲ್ಲಿ ಮನವಿ ಮಾಡಿದರು.