- ಪೌಷ್ಠಿಕ ಆಹಾರ ಶಿಬಿರ, ಪಲ್ಸ್ ಪೋಲಿಯೋ ಲಸಿಕೆ ಜಾಗೃತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಚಿನ್ನಕ್ಕಿಂತ ಅನ್ನ ಲೇಸು, ಅನ್ನಕ್ಕಿಂತ ಅಕ್ಷರ, ಅಕ್ಷರಕ್ಕಿಂತ ಆರೋಗ್ಯ, ಆರೋಗ್ಯಕ್ಕಿಂತ ನೆಮ್ಮದಿ ಮುಖ್ಯ. ಪ್ರಸಕ್ತ ದಿನಗಳಲ್ಲಿ ಜನತೆಗೆ ಚಿನ್ನ-ಅನ್ನಕ್ಕಿಂತ ಆರೋಗ್ಯ, ನೆಮ್ಮದಿ ಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಂತೇಶ್ ಅಭಿಪ್ರಾಯಪಟ್ಟರು.ಇಲ್ಲಿಗ ಸಮೀಪದ ಸಂಕ್ಲೀಪುರ ಗ್ರಾಮದ ಮೈಲಾರಲಿಂಗೇಶ್ವರ ವಿದ್ಯಾಪೀಠದ ಶಾರದಾ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಪೌಷ್ಠಿಕ ಆಹಾರ ಶಿಬಿರ ಮತ್ತು ಪಲ್ಸ್ ಪೋಲೀಯೋ ಲಸಿಕೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಬೆಳಗ್ಗೆ ಬೆಲ್ಲ, ಉತ್ತುತ್ತಿ, ಕೊಬ್ಬರಿ, ರಾಗಿ, ಜೋಳದ ಆಹಾರವನ್ನು ಹೆಚ್ಚು ಸೇವನೆ ಮಾಡುತ್ತಿದ್ದರು. ಆದರೆ, ಇಂದಿನ ಮಕ್ಕಳಿಗೆ ಇಂಥ ಆಹಾರಗಳನ್ನು ನೀಡದೇ, ಕುರ್ ಕುರೆ, ಪಾನಿಪೂರಿ, ಗೋಬಿಯಂಥ ಆಹಾರ ನೀಡಿ ಮಕ್ಕಳ ಆರೋಗ್ಯ ಹದಗೆಡಲು ಕಾರಣರಾಗುತ್ತಿದ್ದೇವೆ ಎಂದರು.೨೭ ಕೋಟಿ ಯುವಜನರು ಡ್ರಗ್ಸ್‌ಗೆ ದಾಸರು:
ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಸದಾನಂದ ಮಾತನಾಡಿ, ಭಾರತವನ್ನು ವೀಕ್ ಮತ್ತು ಶೇಕ್ ಮಾಡಲು ಕೆಲವು ರಾಷ್ಟ್ರಗಳು ಹೊಂಚು ಹಾಕಿವೆ. ಯುಜನರಿಗೆ ನಶೆ ಭರಿಸುವ ಮಾದಕ ವಸ್ತುಗಳನ್ನು ನೀಡುತ್ತಿವೆ. ಭಾರತದಲ್ಲಿ ೨೭ ಕೋಟಿ ಯುವಜನರು ಡ್ರಗ್ಸ್‌ಗೆ ದಾಸರಾಗಿದ್ದಾರೆ. ಜತೆಗೆ ಪ್ರೌಢಶಾಲಾ ಮಕ್ಕಳು ತಂಬಾಕು ಸೇವನೆಗೆ ಒಳಗಾಗಿ ಸಹನೆ, ಏಕಾಗ್ರತೆ ಇಲ್ಲದೇ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ವಿಷಾದಿಸಿದರು.ಶಾಲಾ ಸಂಸ್ಥಾಪಕ ಗದ್ದಿಗೇಶ್ ಮಾತನಾಡಿ, ನಮ್ಮ ಶಾಲೆ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸದಾ ಬೆಂಬಲ ನೀಡುತ್ತದೆ. ಸರ್ಕಾರದ ಕಾರ್ಯಕ್ರಮಗಳಿಗೆ ಸಹಕಾರ, ಮಕ್ಕಳಿಗೆ ಮಹಾತ್ಮರ ಪರಿಚಯ, ಪ್ರತಿ ಮಗುವಿಗೂ ಕಾಳಜಿ ವಹಿಸಿ ಶಿಕ್ಷಣ ನೀಡುತ್ತಿದೆ ಎಂದರು.
ಪೋಲಿಸ್ ಮಂಜುನಾಥ್ ಮಾತನಾಡಿ, ಮಕ್ಕಳಿಗೆ ಹಾಲು, ಮೊಸರು. ಸೇವನೆ ಜತೆಗೆ ಮೊಟ್ಟೆ ನೀಡಬೇಕು. ಅವರಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.ಮುಖ್ಯ ಶಿಕ್ಷಕಿ ಮಮತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೋಷಕರಾದ ವೈಷ್ಣವಿ, ಸವಿತಾ, ಕಾವ್ಯ, ಸಂಗೀತಾ, ವಿದ್ಯಾ, ನೇತ್ರಾ, ವನಿತಾ, ಸುನಿತಾ, ನಯನಾ, ರಾಜೆಶ್ವರಿ, ಸುನೀತಾ ಮತ್ತಿತರರು ಮನೆಯಲ್ಲಿ ವಿವಿಧ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಪರಿಚಯಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಕುಬೇರಪ್ಪ, ನಾಗರಾಜಪ್ಪ, ಅಂ.ಕಾ. ರುದ್ರಮ್ಮ, ಆಶಾ ಕಾರ್ಯಕರ್ತೆ ಜ್ಯೋತಿ, ವೀರಗಾಸೆ ಕಲಾವಿದೆ ಶಿಲ್ಪ, ಉಪಾಧ್ಯಾಯಿನಿ ಸುಷ್ಮಾ ಹಾಗೂ ಪೋಷಕರು ಇದ್ದರು.- - -
-ಚಿತ್ರ-೧: ಸಂಕ್ಲೀಪುರದಲ್ಲಿ ಪೌಷ್ಠಿಕ ಆಹಾರ ಶಿಬಿರ ನಡೆಯಿತು.