ಯುವಕರು ತಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುವ ಆಹಾರ ಮತ್ತು ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಹಾಗೂ ಜಾನಪದ ಪರಿಷತ್ತು ಅಧ್ಯಕ್ಷ ವೈ.ಎಸ್. ಸಿದ್ದೇಗೌಡ ಹೇಳಿದರು. ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ, ಶಾಲೆಗಳು ಹದಿಹರೆಯದವರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಆರೋಗ್ಯ ಮಾಹಿತಿ ಅವಶ್ಯವಾಗಿದೆ ಎಂದರು.
ಕನ್ನಡ ಪ್ರಭ ವಾರ್ತೆ ಬೇಲೂರು
ಯುವಕರು ತಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುವ ಆಹಾರ ಮತ್ತು ಕೆಟ್ಟ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಹಾಗೂ ಜಾನಪದ ಪರಿಷತ್ತು ಅಧ್ಯಕ್ಷ ವೈ.ಎಸ್. ಸಿದ್ದೇಗೌಡ ಹೇಳಿದರು.ಪಟ್ಟಣದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ, ಶಾಲೆಗಳು ಹದಿಹರೆಯದವರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮೃತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಆರೋಗ್ಯ ಮಾಹಿತಿ ಅವಶ್ಯವಾಗಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಮಾತನಾಡಿ, ಹೃದಯ ಸಂಬಂಧಿ ಕಾಯಿಲೆ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳ ಒಂದು ಗುಂಪಾಗಿದೆ. ಇವುಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಪರಿಧಮನಿ ಕಾಯಿಲೆ ಮುಂತಾದವು ಸೇರಿವೆ. ಇವುಗಳಿಗೆ ಮುಖ್ಯ ಕಾರಣಗಳು ಜೀವನಶೈಲಿ, ವಯಸ್ಸು, ಕುಟುಂಬದ ಇತಿಹಾಸ, ಮತ್ತು ಇತರೆ ಆರೋಗ್ಯ ಸಮಸ್ಯೆಗಳು. ಈ ಬಗ್ಗೆ ವಿದ್ಯಾರ್ಥಿಗಳಿಗೆ ಕನಿಷ್ಠ ಅರಿವು ಅಗತ್ಯವೆಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜ್, ದೇಹದ ಬಹುತೇಕ ಭಾಗಗಳನ್ನು ಬದಲಿಸುವ ಅವಕಾಶವಿದೆ. ಆದರೆ ರಕ್ತಕ್ಕೆ ಪರ್ಯಾಯ ವಸ್ತು ಇನ್ನೂ ತಯಾರಿಸಿಲ್ಲ, ಇಂತಹ ರಕ್ತದ ಬಗ್ಗೆ ಅತ್ಯಂತ ಪರಿಣಾಮಕಾರಿ ತಿಳಿವಳಿಕೆ ಮೂಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರಶಾಂತ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಸಾರ್ವಜನಿಕ ಆಸ್ಪತ್ರೆ ಹೆಬ್ಬಾಳು ವೈದ್ಯಾಧಿಕಾರಿ ಡಾ.ಅನುಪಮ ಶೆಟ್ಟಿ, ಸಕಲೇಶಪುರ 7 ಬೀನ್ ಟೀಮ್ ಕಾರ್ಯದರ್ಶಿ ಮುರುಳೀಧರ್ ಎಸ್ ಬಕ್ಕರವಳ್ಳಿ, ಉಪ ಸಭಾಪತಿ ಬಿ. ಎಚ್. ಸುಲೇಮಾನ್, ಕಾರ್ಯದರ್ಶಿ ಧನಂಜಯ, ಪ್ರಾಥಮಿಕ ಶಾಲಾ ವಿಭಾಗದ ಪ್ರಾಂಶುಪಾಲರಾದ ಶ್ರೀನಿಧಿ ವೈ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.