ಯಲ್ಲಾಪುರ: ಮುಂದಿನ ಜನಾಂಗಕ್ಕಾಗಿ ಪಶ್ಚಿಮ ಘಟ್ಟದ ಅರಣ್ಯವನ್ನು ಉಳಿಸಿಕೊಂಡು ಹೋಗಬೇಕಾದ ಮಹತ್ವದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ. ಹೇಳಿದರು.
ಸೋಮವಾರ ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನಮ್ ಪರಿಸರದಲ್ಲಿ ಅಕ್ಷರಕ್ಕೊಂದು ವೃಕ್ಷ ಕಾರ್ಯಕ್ರಮದಲ್ಲಿ ಶ್ರೀಗಂಧದ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಶ್ಚಿಮ ಘಟ್ಟದ ಅರಣ್ಯಗಳು ಜನಪದೀಯ ಚಿಂತನೆಯಿಂದಲೇ ಈ ವರೆಗೂ ಬೆಳೆದುಬಂದಿದೆ. ಈ ಪಶ್ಚಿಮ ಘಟ್ಟದ ೫ ಜಿಲ್ಲೆಗಳು ಪ್ರಕೃತಿಯ ಸಂಪತ್ತಿನಿಂದ ಕೂಡಿದೆ. ದಕ್ಷಿಣ ಭಾರತದ ಉಳಿವಿಗೆ ಈ ಘಟ್ಟ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.ಸನಾತನ ಧರ್ಮದಲ್ಲಿರುವಂತೆ ಜಾನಪದ ನುಡಿಗಳನ್ನು ಅನುಸರಿಸಿ ಮುನ್ನಡೆದರೆ ಪ್ರಕೃತಿ ಸಂರಕ್ಷಣೆ ಸಾಧ್ಯ. ನಮ್ಮ ಹಿರಿಯರು ಭೂತಾಯಿಯಲ್ಲಿ ಕ್ಷಮೆ ಕೋರಿ ನಮ್ಮ ದಿನದ ಕಾರ್ಯ ಪ್ರಾರಂಭಿಸುವ ಪರಂಪರೆಯಿತ್ತು. ಅದನ್ನು ಬಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸುಮೇರು ಜ್ಯೋತಿರ್ವನವು ವೈಜ್ಞಾನಿಕ ಮತ್ತು ನಮ್ಮ ಪ್ರಾಚೀನ ಪರಂಪರೆಯ ಶಾಸ್ತ್ರೀಯವಾದ ವನನಿರ್ಮಾಣ ಕಾರ್ಯ ಮಾಡುತ್ತಿರುವುದು ಅನನ್ಯವಾದುದು ಎಂದು ಹೇಳಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ. ಬಿರಾದಾರ್ ಮಾತನಾಡಿ, ಮೊದಲು ಪ್ರಾಣವಾಯು, ಆಮೇಲೆ ನೀರು, ಆಮೇಲೆ ಆಹಾರ. ಹೀಗೆ ನಮ್ಮ ಬದುಕಿಗೆ ಪರಿಸರ ಅಷ್ಟು ಅಮೂಲ್ಯವಾದುದು. ಇಂತಹ ಮೌಲ್ಯಯುತ, ಧಾರ್ಮಿಕ ವೈಜ್ಞಾನಿಕ ಕಾರ್ಯಗಳು ಸಮಾಜಕ್ಕೆ ಬೇಕಿವೆ. ನಮ್ಮ ವಿಶ್ವವಿದ್ಯಾಲಯದಲ್ಲೂ ಇಂತಹ ಅಮೃತ ವನವನ್ನು ನಿರ್ಮಿಸುವ ಪ್ರಯತ್ನ ಮಾಡುತ್ತೇವೆ ಎಂದರು.ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಇಂತಹ ಸುಂದರ ಬೆಟ್ಟದ ಮೇಲೆ ಶಾಸ್ತ್ರೀಯ ಪದ್ಧತಿಯಲ್ಲಿ ವೃಕ್ಷಾರೋಪಣ ಮಾಡುತ್ತಿರುವುದು ಸಂತಸ ತಂದಿದೆ. ಹಿತ್ಲಳ್ಳಿ ನಾಗೇಂದ್ರ ಭಟ್ಟರು ೧೯೮೭ರಲ್ಲಿ ಸಾಲ್ಕಣಿಯಲ್ಲಿ ಶಿರಸಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಲ್ಲಿ ನಕ್ಷತ್ರವನ ನಿರ್ಮಿಸಿದ್ದರು. ಅದೇ ಚಿಂತನೆಯಲ್ಲೇ ಕೆ.ಸಿ. ನಾಗೇಶ ಭಟ್ಟ ಅವರು ಮುಂದುವರಿಸಿದ್ದಾರೆ ಎಂದರು.
ಅಕ್ಷರ ವೃಕ್ಷ ಸೇವೆಯಿಂದ ವಿದ್ಯಾ ಪ್ರಗತಿಯಾಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ವೃಕ್ಷಗಳನ್ನು ಮಾನವನಿಗಿಂತ ಮೂರು ಯುಗ ಮೊದಲೇ ಸೃಷ್ಟಿಸಿದ್ದಾನೆ. ಆದ್ದರಿಂದ ವೃಕ್ಷ ಸೇವೆಯನ್ನು ಎಲ್ಲರೂ ಮಾಡುವಂತಾಗಲಿ ಎನ್ನುವ ಸಂದೇಶವನ್ನು ಜ್ಯೋತಿರ್ವನಮ್‌ದಿಂದ ಪ್ರೇರಣೆ ನೀಡುವಂತಾಗಬೇಕು ಎನ್ನುವುದೇ ಕೆ.ಸಿ. ನಾಗೇಶ ಅವರ ಚಿಂತನೆಯಾಗಿದೆ ಎಂದು ಹೇಳಿದರು.ಸಸ್ಯ ವಿಜ್ಞಾನಿ ಡಾ. ಕೇಶವ ಕೂರ್ಸೆ, ರಾಷ್ಟ್ರ ಪಶಸ್ತಿ ಪುರಸ್ಕೃತ ಪ್ರಕಾಶ್ ಮಂಚಾಲೆ, ಪ್ರಕಾಶ್ ಅಡೆಮನೆ, ರಾಮಚಂದ್ರ ಹೆಗಡೆ, ಸುಮೇರು ವನದ ಅಧ್ಯಕ್ಷೆ ಡಾ. ನಿವೇದಿತಾ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಅಕ್ಷರಕ್ಕೊಂದು ವೃಕ್ಷಾರೋಪಣ ಕಾರ್ಯಕ್ರಮದ ಪರಿಕಲ್ಪನೆ, ಸಂಯೋಜನೆ ಮಾಡಿದ್ದ ಡಾ. ನಾಗೇಶ ಭಟ್ಟ ಕೆ.ಸಿ. ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ಜ್ಯೋತಿರ್ವಿಜ್ಞಾನ ಗುರುಕುಲದ ವಿದ್ಯಾರ್ಥಿಗಳಾದ ಕಾರ್ತಿಕ್ ಸ್ವಾಗತಿಸಿದರು. ಅಮೋಘ ಶರ್ಮಾ ನಿರ್ವಹಿಸಿದರು. ಮಹೇಶ ಭಟ್ಟ ವಂದಿಸಿದರು.