ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೂಲಿ ಕಾರ್ಮಿಕರ ಮೇಟಿ (ಮುಖ್ಯಸ್ಥ) ಗೋಪಾಲ್ ಮಾತನಾಡಿ, ಬೇವಿನಹಳ್ಳಿ, ಶ್ರವಣನಹಳ್ಳಿ, ಚಿಕ್ಕಮಂದಗೆರೆ ಗ್ರಾಮಗಳ 150 ಕೂಲಿಕಾರ್ಮಿಕರು ಕೆಲಸದ ಮೇಟಿ ಪವಿತ್ರ, ಸುರೇಶ್ ಹಾಗೂ ತಮ್ಮ ಉಸ್ತುವಾರಿಯಲ್ಲಿ ಬೇವಿನಹಳ್ಳಿ ಅಮಾನಿಕೆರೆ ಊಳು ಎತ್ತುವ ಕೆಲಸ ಮಾಡುತ್ತಿದ್ದರು. ಏಕಾಏಕಿ ಹಲವು ಕಿಡಿಗೇಡಿಗಳು ಸ್ಥಳಕ್ಕೆ ಆಗಮಿಸಿ ಕೂಲಿಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದರು.
ಮೇಟಿ ಪವಿತ್ರಾ ಮಾತನಾಡಿ, ಆಗಿಂದಾಗ್ಗೆ ಕಿಡಿಗೇಡಿಗಳು ತಾವು ಕೆಲಸ ಮಾಡುವ ಸ್ಥಳಕ್ಕೆ ಆಗಮಿಸಿ ಮಹಿಳೆಯರ ಮೇಲೆ ಅವಾಚ್ಯ ಶಬ್ಧಗಳಿಂದ ಮೂದಲಿಸಿ ಬೆದರಿಕೆ ಹಾಕುವುದರಿಂದ ಕೆಲಸ ಮಾಡಲು ಪ್ರಾಣಭಯವಾಗಿದೆ ಎಂದು ದೂರಿದರು.ಕೂಲಿ ಕೆಲಸವೇ ಬದುಕಿಗೆ ಆಧಾರ. ಈ ಹಿಂದೆ ಇದೇರೀತಿ ಕೆಲಸ ಮಾಡುವಾಗ ಡ್ರೋಣ್ ಮೂಲಕ ಬಹಿರ್ದೆಸೆಗೆ ಹೋಗುವಾಗ ವಿಡಿಯೋ ಮಾಡಿ ತೊಂದರೆ ನೀಡಿದ್ದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮಂದಗೆರೆ ಗ್ರಾಪಂ ಪಿಡಿಒ, ತಾಪಂ ಇಒ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು.
ಯಂತ್ರೋಪಕರಣಗಳಲ್ಲಿ ಕೆಲಸ ಮಾಡುವ ಹಲವು ಬಲಾಢ್ಯರ ಕುಮ್ಮಕ್ಕಿನಿಂದ ಇಂತಹ ಬೆದರಿಕೆ ಹಲ್ಲೆ ನಡೆಯುತ್ತಿದೆ. ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ಕೂಲಿ ಕಾರ್ಮಿಕರಾದ ಗೋಪಾಲ್, ಪವಿತ್ರ, ಸುರೇಶ್, ನಟರಾಜು, ಕಾಂತಾಮಣಿ, ಕಾವ್ಯ, ರಾಧ, ಪಾರ್ವತಮ್ಮ, ನೀಲಮ್ಮ, ಗಿಡ್ಡಮ್ಮ, ಯಶೋಧಾ, ಪುಟ್ಟಮ್ಮ, ಅನಿತಾ, ರಾಣಿ, ಸಾಕಮ್ಮಮುಂತಾದವರು ಇದ್ದರು.