ಗ್ರಾಮೀಣರಿಗೆ ಆರೋಗ್ಯ ಜಾಗೃತಿ ಮೂಡಿಸಬೇಕು

KannadaprabhaNewsNetwork |  
Published : Jan 06, 2025, 01:04 AM IST
ಸಿಕೆಬಿ-2 ತಾಲ್ಲೂಕಿನ ಕಡಶೀಗೇನಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ನಡೆಸಿದ ವೈದ್ಯಕೀಯ ತಂಡಕ್ಕೆ ಗ್ರಾಮಸ್ಥರು ಸನ್ಮಾನಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಜನರಿಗೆ ಉಪಯುಕ್ತವಾಗಲಿ ಮತ್ತು ಅವರ ಆರೋಗ್ಯ ಸಮಸ್ಯೆ ಪರಿಹರಿಸಿಕೊಳ್ಳಲೆಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪರಿಶ್ರಮ ನೀಟ್ ಅಕಾಡಮಿ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವತಿಯಿಂದ ಕಳೆದ ಒಂದೂವರೆ ವರ್ಷದಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಭಾನುವಾರ ಒಂದೊಂದು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮುನೇಗೌಡ ತಿಳಿಸಿದರು

ತಾಲ್ಲೂಕಿನ ಕಡಶೀಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶಾಸಕ ಪ್ರದೀಪ್ ಈಶ್ವರ್, ಪರಿಶ್ರಮ ನೀಟ್ ಅಕಾಡಮಿ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ಭಾನುವಾರ ಆರೋಗ್ಯ ತಪಾಸಣೆ

ಗ್ರಾಮೀಣ ಪ್ರದೇಶದ ಬಡ ಜನತೆಗೆ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಒತ್ತು ನೀಡುವ ಧ್ಯೇಯ ಹೊಂದಿರುವ ಶಾಸಕ ಪ್ರದೀಪ್ ಈಶ್ವರ್ ರವರು ಇತ್ತೀಚೆಗೆ ವೈದ್ಯಕೀಯ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದು, ಗ್ರಾಮೀಣ ಜನರಿಗೆ ಉಪಯುಕ್ತವಾಗಲಿ ಮತ್ತು ಅವರ ಆರೋಗ್ಯ ಸಮಸ್ಯೆ ಪರಿಹರಿಸಿಕೊಳ್ಳಲೆಂದು ತಜ್ಞ ವೈದ್ಯರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪರಿಶ್ರಮ ನೀಟ್ ಅಕಾಡಮಿ ಮತ್ತು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವತಿಯಿಂದ ಕಳೆದ ಒಂದೂವರೆ ವರ್ಷದಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಭಾನುವಾರ ಒಂದೊಂದು ಗ್ರಾಮದಲ್ಲಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಿ, ಆ ಗ್ರಾಮದ ಜನರ ಆರೋಗ್ಯ ಕಾಳಜಿ ವಹಿಸುತ್ತಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ ಜನರು ಉತ್ತಮ ಚಿಕಿತ್ಸೆಗಾಗಿ ದೂರ ಹೋಗಬೇಕು. ಅದರಲ್ಲೂ ವಯಸ್ಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಯುವಕರಿಗೆ ಹಲವಾರು ಸಮಸ್ಯೆಗಳಿರುತ್ತವೆ. ಆರ್ಥಿಕ ಸಮಸ್ಯೆಯಿಂದ ದೊಡ್ಡ,ಡೊಡ್ಡ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯ ವಾಗುವುದಿಲ್ಲ. ಮತ್ತು ಕೆಲವರಿಗೆ ಕಾಯಿಲೆ ಇರುವುದು ತಿಳಿದಿರುವುದಿಲ್ಲ. ಅಂಹತವರು ಶಿಭಿರಕ್ಕೆ ಬಂದು ತಪಾಸಣೆ ಮಾಡಿದಾಗಲೇ ತಿಳಿಯುತ್ತದೆ. ಈರೀತಿ ಗ್ರಾಮೀಣರಿಗೆ ಬೆಂಬಲವಾಗಿ ನಿಂತು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಬಡ ರೋಗಿಗಳಿಗೆ ಅನುಕೂಲ

ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿವಾಂತಿ-ಬೇದಿ, ಟೈಫಾಯಿಡ್‌, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್‌, ಹೃದ್ರೋಗ, ಕ್ಯಾನ್ಸರ್ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರು ಚಿಕಿತ್ಸೆ ಪಡೆಯುವುದು ಕಷ್ಟ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.

ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದ್ರೋಗ, ನರರೋಗ, ಸ್ತ್ರೀ ರೋಗ,ಕ್ಯಾನ್ಸರ್, ಕೀಲು ಮೂಳೆ ರೋಗಗಳ ತಪಾಸಣೆ,ನೇತ್ರ ತಪಾಸಣೆ ವಿಭಾಗ, ಸಾಮಾನ್ಯ ಚಿಕಿತ್ಸೆ ವಿಭಾಗ, ಪ್ರಸೂತಿ, ಹೃದಯ ಸಂಬಂಧಿ ಕಾಯಿಲೆ ಮತ್ತು ಕೀಲು ಮೂಳೆ, ಹೀಗೆ ಆರು ಪ್ರತ್ಯೇಕ ವಿಭಾಗಗಳಲ್ಲಿ ತಜ್ಞ ವೈದ್ಯರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.ವೈದ್ಯಕೀಯ ತಂಡಕ್ಕೆ ಸನ್ಮಾನ

ಅಧಿಕ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್), ಕಣ್ಣಿನ ತಪಾಸಣೆ, ಮೂಳೆ ಸಾಂದ್ರತೆ ಮತ್ತಿತರ ಪರೀಕ್ಷೆಗಳನ್ನು ಮಾಡಲಾಯಿತು. ಇಸಿಜಿ ವ್ಯವಸ್ಥೆ ಕಲ್ಪಿಸಿದ್ದರಿಂದ ಗ್ರಾಮದ ಬಹಪಾಲು ಜನರು ಶಿಬಿರದಲ್ಲಿ ತಪಾಸಣೆಗೆ ಒಳಗಾದರು. ಈ ವೇಳೆ ಆರೋಗ್ಯ ತಪಾಸಣೆ ನಡೆಸಿದ ವೈದ್ಯಕೀಯ ತಂಡಕ್ಕೆ ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಬೈರೇಗೌಡ, ಶಿವಕುಮಾರ್. ಆನಂದ್. ಮಂಜುನಾಥ್. ಶಾಂತಕುಮಾರ್. ಗೋಪಾಲ್.ಮುನಿಕದಿರಪ್ಪ ಮತ್ತಿತರ ಮುಖಂಡರು ಇದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ