ಆರೋಗ್ಯ ಶಿಬಿರಗಳಿಂದ ಗ್ರಾಮೀಣ ಜನರಿಗೆ ಅನುಕೂಲ

KannadaprabhaNewsNetwork | Published : Jul 1, 2024 1:47 AM

ಸಾರಾಂಶ

ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ಆರೋಗ್ಯ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿ.ಎಲ್. ಮಲಘಾಣ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ಆರೋಗ್ಯ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿ.ಎಲ್. ಮಲಘಾಣ ಹೇಳಿದರು.

ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಂಭುಲಿಂಗಾನಂದ ಸತ್ಸಂಗ ಸದ್ಭೋದನಾ ಸಮಿತಿ ಹಾಗೂ ಹಿರಿಯ ನಾಗರಿಕರ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ಧ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು. ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ವೆಚ್ಚ ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು. ಉಪತಹಸೀಲ್ದಾರ್‌ ಸತೀಶ ಬೇವೂರ ಮಾತನಾಡಿ, ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಮಾತನಾಡಿದರು. ೧೨೦ ಕ್ಕೂ ಹೆಚ್ಚು ಹಿರಿಯ ನಾಗರಿಕರು ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಹಿರಿಯ ನಾಗರಿಕರ ಸೌಕರ್ಯಗಳ ಬಗ್ಗೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಹಿರಿಯ ನಾಗರಿಕರಿಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮನವಿ ಸಲ್ಲಿಸಲಾಯಿತು. ಕಾಡರಕೊಪ್ಪ ಗ್ರಾಮದ ಪೂರ್ಣಾನಂದ ಸ್ವಾಮೀಜಿ ಸಾನ್ನಿಧ್ಯ, ಬಿ.ಎನ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ವೈದ್ಯಾಧಿಕಾರಿ ಡಾ.ಸುನೀಲ ಬೆನ್ನೂರ, ಕೆ.ಆರ್. ಪಾಟೀಲ, ಡಿ.ಎಂ. ತುಬಾಕಿ, ವೆಂಕಣ್ಣಾ ಮುಳ್ಳೂರ, ಎಸ್.ಎಂ. ಹಗ್ಗದ, ವಿ.ಬಿ. ಮಾಳಿ, ಚಂದ್ರಕಾಂತ ರಂಗಣ್ಣವರ, ಬಸವರಾಜ ಅಂಗಡಿ, ಡಿ.ಎಂ. ಪತ್ತಾರ, ಬಸವರಾಜ ಉದಪುಡಿ, ಬಿ.ಎಂ. ಜಗಲಿ ಹಿರಿಯ ನಾಗರಿಕರ ಸೇವಾ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.

Share this article