ಕನ್ನಡಪ್ರಭ ವಾರ್ತೆ ಹಲಗೂರು
ನಾವು ವಾಸಿಸುವ ಸ್ಥಳದಲ್ಲಿ ಉತ್ತಮ ಪರಿಸರವಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗಲಿದೆ ಎಂದು ಚರ್ಮರೋಗ ತಜ್ಞ ಡಾ.ಎಂ.ಎಲ್. ರಾಜಶೇಖರ್ ತಿಳಿಸಿದರು.ಚನ್ನಪಟ್ಟಣ ರಸ್ತೆಯ ಲಯನ್ಸ್ ಕ್ಲಬ್ ಭವನದಲ್ಲಿ ನಡೆದ ಚರ್ಮರೋಗ ತಪಾಸಣಾ ಶಿಬಿರದಲ್ಲಿ ಸುಮಾರು 160ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಿ ಮಾತನಾಡಿದ ಅವರು, ಶಿಬಿರದಲ್ಲಿ ಚರ್ಮ ಕಾಯಿಲೆಗಳು, ಅಲರ್ಜಿ, ಮೊಡವೆ, ತೊನ್ನು, ಕೂದಲು ಉದುರುವಿಕೆ, ಉಗುರಿನ ಸಮಸ್ಯೆ, ಉಳಕಡ್ಡಿ/ ಗಜಕರ್ಣ, ಮೈನವೆ, ಸೊರಿಯಾಸಿಸ್ ಹಾಗೂ ಎಲ್ಲಾ ತರಹದ ಅಲರ್ಜಿಗಳಿಗೆ ತಪಾಸಣೆ ನಡೆಸಿ ಅವರಿಗೆ ಉಚಿತವಾಗಿ ಔಷಧಿ ಮಾತ್ರೆಗಳನ್ನು ನೀಡಿದ್ದೇನೆ ಎಂದರು.
ಇತ್ತೀಚೆಗೆ ಉಳಕಡ್ಡಿ ಎಂಬುದು ಜಾಸ್ತಿ ಕಂಡು ಬಂದಿದೆ. ಮನೆಯಲ್ಲಿ ಒಬ್ಬರಿಗೆ ಬಂದರೆ ಮನೆಯಲ್ಲಿರುವ ಎಲ್ಲರಿಗೂ ಸಹ ಹರಡುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಯಿಂದ ಇರಬೇಕು. ಉತ್ತಮ ಪರಿಸರ ಹಾಗೂ ಹಣ್ಣು- ತರಕಾರಿಗಳನ್ನು ಸೇವಿಸಿ, ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.ನಾನು ಮಾರಗೌಡನಹಳ್ಳಿ ಗ್ರಾಮದವನು. ನಮ್ಮ ತಂದೆ ಇದೇ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ, ತಾಯಿ ಜಿಪಂ ಸದಸ್ಯರಾಗಿದ್ದರು. ಬೆಂಗಳೂರಿನಲ್ಲಿ ಚರ್ಮರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರತಿ ವರ್ಷವೂ ನಿಮ್ಮ ಸೇವೆ ಮಾಡುವ ಮನೋಭಾವ ಇದ್ದು, ಕಳೆದ ಬಾರಿ ಸಹ ಚಿಕಿತ್ಸೆ ಶಿಬಿರದಲ್ಲಿ ಪಾಲ್ಗೊಂಡಿದ್ದೆ. ಮುಂದೆಯೂ ನಿಮ್ಮ ಸೇವೆ ಮಾಡಲು ಸಿದ್ಧನಿದ್ದೇನೆ. ಗ್ರಾಮೀಣ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಲಯನ್ಸ್ ಕ್ಲಬ್ ವತಿಯಿಂದ ವೈದ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎನ್.ಕೆ. ಕುಮಾರ್, ಡಿ.ಎಲ್. ಮಾದೇಗೌಡ, ಶಿವರಾಜು ಕೆ. ಎಚ್.ಆರ್.ಪದ್ಮನಾಭ, ಎಚ್.ವಿ.ರಾಜು , ಪುಟ್ಟಸ್ವಾಮಿ, ಗುರುಸಿದ್ದು ಸೇರಿದಂತೆ ಸಂಸ್ಥೆಯ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.