ಪರಿಸರ ಸ್ವಚ್ಛವಾಗಿದ್ದಾಗ ಆರೋಗ್ಯ ರಕ್ಷಣೆ ಸಾಧ್ಯ

KannadaprabhaNewsNetwork | Published : Jan 31, 2025 12:49 AM

ಸಾರಾಂಶ

ಗಾಂಧೀಜಿಯವರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ಇಡೀ ದೇಶವೆಲ್ಲಾ ಸ್ವಚ್ಛವಾಗಿರಬೇಕು ಎಂಬ ಕನಸು ಕಂಡಿದ್ದರು. ಅವರ ಕನಸನ್ನು ನಾವೆಲ್ಲರೂ ನನಸು ಮಾಡಿ ಅವರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಬೇಕಿದೆ. ನಾವು ವಾಸಿಸುವ ಸುತ್ತಮುತ್ತಲ ಪರಿಸರ ಶುಚಿತ್ವದಿಂದ ಕೂಡಿದ್ದಾಗ ಮಾತ್ರ ಲವಲವಿಕೆಯಿಂದ ಕ್ರಿಯಾಶೀಲರಾಗಿ ಕೆಲಸ ಮಾಡಿ ಆರೋಗ್ಯವಾಗಿರಲು ಸಾಧ್ಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಾತ್ಮ ಗಾಂಧೀಜಿಯ ಕನಸು ನನಸಾಗಲು ಸ್ವಚ್ಛತೆಯನ್ನ ಶ್ರೇಷ್ಠ ಎಂದು ಭಾವಿಸಿ ಸಮಾನತೆಯನ್ನು ಮೂಲ ಮಂತ್ರವಾಗಿಸಿ ಮುನ್ನಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಹೇಳಿದರು.ಹುತಾತ್ಮರ ದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ವಕೀಲರ ಸಂಘ ಹಾಗೂ ನಗರಸಭೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಮಾವಿನ‌ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸ್ವಚ್ಛತೆಗೆ ಆದ್ಯತೆ

ಗಾಂಧೀಜಿಯು ದೇಶವನ್ನು ಬೆಳಕಿನೆಡೆಗೆ ಕೊಂಡೊಯ್ದ ಆದರ್ಶ ಪುರುಷರಾಗಿದ್ದಾರೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಬೇಕು. ಗಾಂಧೀಜಿಯವರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ಇಡೀ ದೇಶವೆಲ್ಲಾ ಸ್ವಚ್ಛವಾಗಿರಬೇಕು ಎಂಬ ಕನಸು ಕಂಡಿದ್ದರು. ಅವರ ಕನಸನ್ನು ನಾವೆಲ್ಲರೂ ನನಸು ಮಾಡಿ ಅವರಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಬೇಕಿದೆ. ನಾವು ವಾಸಿಸುವ ಸುತ್ತಮುತ್ತಲ ಪರಿಸರ ಶುಚಿತ್ವದಿಂದ ಕೂಡಿದ್ದಾಗ ಮಾತ್ರ ಲವಲವಿಕೆಯಿಂದ ಕ್ರಿಯಾಶೀಲರಾಗಿ ಕೆಲಸ ಮಾಡಿ ಆರೋಗ್ಯವಾಗಿರಲು ಸಾಧ್ಯ ಎಂದರು.

ಆದ್ದರಿಂದ ಕಸವನ್ನು ಮನೆಯಿಂದಲೇ ಅಂದರೆ ಮೂಲದಲ್ಲೇ ಹಸಿ ಮತ್ತು ಒಣಕಸವನ್ನಾಗಿ ಬೇರ್ಪಡಿಸಿ ನಗರಸಭೆಯ ಕಸಸಂಗ್ರಹ ವಾಹನಕ್ಕೆ ನೀಡಬೇಕು. ರಸ್ತೆಗಳು, ಮಾರುಕಟ್ಟೆ,ಬಸ್ ನಿಲ್ದಾಣ,ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳನ್ನು ತಮ್ಮ ಮನೆಗಳ ರೀತಿಯೇ ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.ಸಸಿ ನೆಟ್ಟು ಪೋಷಣೆ ಮಾಡಿ

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರದ್ದಾಗಿದೆ. ಹೆಚ್ಚು ಗಿಡ-ಮರ ಬೆಳೆಸುವಲ್ಲಿ ಸಾರ್ವಜನಿಕರು ಮುಂದಾಗಬೇಕು. ಆಹಾರ ಮತ್ತು ನೀರು ಬಿಟ್ಟರೆ ಕೆಲವು ದಿನಗಳವರೆಗೆ ಬದುಕಬಹುದು. ಆದರೆ ಗಾಳಿಯಿಲ್ಲದೇ ಬದುಕುವುದು ಅಸಾಧ್ಯ. ಆ ಗಾಳಿ ನೀಡುವ ಗಿಡಮರ ಬೆಳೆಸುವಲ್ಲಿ ನಿರಾಸಕ್ತಿ ತೋರುತ್ತಿದ್ದೇವೆ. ಜಗತ್ತಿನ ಎಲ್ಲ ಜೀವಿಗಳಿಗೂ ಆಮ್ಲಜನಕ ನೀಡುವ ಗಿಡ-ಮರಗಳನ್ನು ಬೆಳೆಸುವ ಮೂಲಕ ನಗರವನ್ನು ಹಸಿರಾಗಿಸಬೇಕಿದೆ ಎಂದರು.

ಅಲ್ಲದೇ ನಗರಸಭೆ ಪೌರಕಾರ್ಮಿಕರು ಬಂದಾಗ ಅವರಿಗೆ ಹಸಿಕಸ-ಒಣಕಸ ವಿಂಗಡಿಸಿ ನೀಡಿದರೆ ಸಹಕಾರಿಯಾಗುತ್ತದೆ. ಸಾರ್ವಜನಿಕರು ತಮ್ಮ ಜವಾಬ್ದಾರಿ ಮರೆತು ಕಸ ಎಲ್ಲೆಂದರಲ್ಲಿ ಎಸೆದು ನಗರವನ್ನು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೇ, ಸ್ವಚ್ಛತೆ ಎಲ್ಲಿರುತ್ತದೆಯೋ ಅಲ್ಲಿ ಆರೋಗ್ಯವಿರುತ್ತದೆ. ಸ್ವಚ್ಛತೆ ಎನ್ನುವುದು ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿರಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಕಸಮುಕ್ತವಾಗಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪೌರಕಾರ್ಮಿಕರನ್ನು ಗೌರವಿಸಿ

ನಗರಸಭೆ ಪೌರಾಯುಕ್ತ ಮನ್ಸೂರ್ ಆಲಿ ಮಾತನಾಡಿ, ಸ್ವಚ್ಛತೆ ಎನ್ನುವುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ನಗರದ ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಬಡಾವಣೆಗೆ ಬಂದಾಗ ಗೌರವದಿಂದ ಕಾಣಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ , ವಕೀಲರ ಸಂಘದ ಜಿಲ್ಲಾಧ್ಯಕ್ಷ ಅಭಿಲಾಶ್, ಎಪಿಎಂಸಿ ಕಾರ್ಯದರ್ಶಿ ಉಮಾ, ವಕೀಲರ ಸಂಘದ ಸದಸ್ಯರು ಪದಾಧಿಕಾರಿಗಳು, ನ್ಯಾಯಾಂಗ ಇಲಾಖೆ, ನಗರಸಭೆ, ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ವರ್ತಕರು, ರೈತರು, ಪೌರಕಾರ್ಮಿಕರು ಇದ್ದರು.

Share this article