ಚಿತ್ರದುರ್ಗ: ಜಿಲ್ಲೆಯಾದ್ಯಂತ ಆರೋಗ, ಕವಚ 108ರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಡಿಸೆಂಬರ್‌ನಿಂದ ವೇತನ ಪಾವತಿಯಾಗದೇ ಇರುವುದಕ್ಕೆ ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ಉಪಾಧ್ಯಕ್ಷ ಮಂಜುನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 24 ಅಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಎಂಟಿ ಪೈಲಟ್ 128 ಚಾಲಕರು ಸುಮಾರು 127 ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಡಿಸೆಂಬರ್-2023ರಿಂದ ಮಾರ್ಚ್-2024ರವರೆಗೆ ವೇತನ ಪಾವತಿಯಾಗಿಲ್ಲದ ಕಾರಣ ಸಿಬ್ಬಂದಿ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎಂದು ನೋವು ತೋಡಿಕೊಂಡರು.ಸುಮಾರು 5 ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರೆಯುತ್ತಿದ್ದು, 3ರಿಂದ 4 ತಿಂಗಳಿಗೆ ಒಂದು ಸಾರಿ ವೇತನ ಪಡೆಯಲು ಪರದಾಡುವಂತಾಗಿದೆ. ಈ ಮೊದಲು ಆಗಸ್ಟ್ 2022ರವರೆಗೆ ಇಎಂಟಿಗೆ 15509 ರು. ಮತ್ತು ಪೈಲಟ್‍ಗೆ 15731 ರು. ವೇತನ ರೂಪದಲ್ಲಿ ಪಡೆದುಕೊಳ್ಳುತ್ತಿದ್ದೆವು. ತದನಂತರ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಾಕಿ ಇದ್ದ 3 ವರ್ಷಗಳ ಹೆಚ್ಚುವರಿ ವೇತನ (ಇಂಕ್ರಿಮೆಂಟ್ ಶೇ.45) ಸೇರಿ ಇಎಂಟಿಗೆ 36608 ರು. ಮತ್ತು ಪೈಲಟ್‍ಗೆ 35603 ರು. ವೇತನ ರೂಪದಲ್ಲಿ ದೊರೆಯುತ್ತಿತ್ತು. ಈ ಹೆಚ್ಚುವರಿ ಹೊಸ ವೇತನವನ್ನು ಕೇವಲ 6 ತಿಂಗಳುಗಳ ಕಾಲ ಮಾತ್ರ ನೀಡಿದ್ರು ಏಕಾಏಕಿ ಕಡಿತಗೊಳಿಸಿದ್ದಾರೆ ಎಂದು ದೂರಿದರು.
ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಮತ್ತು ಉಪನಿರ್ದೇಶಕರು ಹಾಗೂ ಸಂಸ್ಥೆಯ ಮುಖ್ಯಸ್ಥರು ರಾಜ್ಯ ಪದಾಧಿಕಾರಿಗಳನ್ನೊಳಗೊಂಡಂತೆ ಒಂದು ಸಭೆಯನ್ನು ಆಯೋಜಿಸಿ ಸಮಸ್ಯೆಗಳ ನಿವಾರಿಸಬೇಕೆಂದು ಮಂಜುನಾಥ್ ಒತ್ತಾಯಿಸಿದರು. ಸುವರ್ಣ ಕರ್ನಾಟಕ ಆರೋಗ್ಯ ಕವಚ(108) ನೌಕರರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಚಿತ್ರಲಿಂಗಪ್ಪ, ಗೌರವಾಧ್ಯಕ್ಷ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಶಿವಮೂರ್ತಿ, ಜಂಟಿ ಕಾರ್ಯದರ್ಶಿ ಸುಂದರೇಶ್ ಇದ್ದರು.