ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ನರೇಗಾ ಯೋಜನೆ ಸಹಾಯಕ ನಿರ್ದೇಶಕ ಡಿ. ವೀರಣ್ಣ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರರು ಬೇಸಿಗೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ನರೇಗಾ ಯೋಜನೆಯಡಿ ಏ.1ರಿಂದ ಪ್ರತಿ ದಿನಕ್ಕೆ ಕೂಲಿಕಾರರಿಗೆ ₹370 ಕೂಲಿ ಹೆಚ್ಚಳ ಮಾಡಿದ್ದು, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರ ಜಮೀನು, ಹೊಲ ಗದ್ದೆಗಳಲ್ಲಿ ಯಾವುದೇ ಕೃಷಿ ಚಟುವಟಿಕೆ ಇರುವುದಿಲ್ಲ,ಹಾಗಾಗಿ ಎರಡು ತಿಂಗಳು ನಿರಂತರವಾಗಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ ಎಂದರು.ಏಪ್ರಿಲ್ ಹಾಗೂ ಮೇ ತಿಂಗಳು ಬಿಸಿಲಿನ ತಾಪಮಾನ ಹೆಚ್ಚಾಗಿದೆ, ಇದರಿಂದ ಶೇ. 30 ರಷ್ಟು ಕೆಲಸದ ಅಳತೆಯಲ್ಲಿ ರಿಯಾಯ್ತಿ ಇದೆ ಹಾಗೂ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಕೆಲಸದ ಅಳತೆಯ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯ್ತಿ ನೀಡಲಾಗಿದೆ. ಇದರೊಂದಿಗೆ ಶೇ.60ರಷ್ಟು ಮಹಿಳೆಯರು ನರೇಗಾ ಕೆಲಸದಲ್ಲಿ ಭಾಗಿಯಾಗಿ ಸ್ತ್ರೀ ಚೇತನ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಗುತ್ತೆಪ್ಪ ತಳವಾರ್, ವೈದ್ಯಾಧಿಕಾರಿ ಚೆನ್ನಪ್ಪ ನಾಯಕ್,ಬಸವಂತಪ್ಪ ಎಸ್, ಟಿಐಇಸಿ ಪ್ರಕಾಶ್ ನಾಯಕ್, ರವಿಕುಮಾರ್, ನರೇಶ್, ಶಿವರಾಜ್, ಅನುಸೂಯಮ್ಮ, ಆಶಾ ಕಾರ್ಯಕರ್ತರು, ಕಾಯಕ ಬಂಧುಗಳು ಉಪಸ್ಥಿತರಿದ್ದರು.