೩೦ರಂದು ಆರೋಗ್ಯ ತಪಾಸಣಾ ಶಿಬಿರ

KannadaprabhaNewsNetwork | Published : Nov 19, 2024 12:46 AM

ಸಾರಾಂಶ

ತುರುವೇಕೆರೆತಾಲೂಕಿನ ಕರುನಾಡ ವಿಜಯಸೇನೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.೩೦ರ ಶನಿವಾರ ಬೃಹತ್ ಪ್ರಮಾಣದಲ್ಲಿ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕಣ್ಣಿನ ತಪಾಸಣೆಯ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಕರುನಾಡ ವಿಜಯಸೇನೆಯ ಅಧ್ಯಕ್ಷ ಎಚ್.ಎಸ್.ಸುರೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಕರುನಾಡ ವಿಜಯಸೇನೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.೩೦ರ ಶನಿವಾರ ಬೃಹತ್ ಪ್ರಮಾಣದಲ್ಲಿ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಕಣ್ಣಿನ ತಪಾಸಣೆಯ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಕರುನಾಡ ವಿಜಯಸೇನೆಯ ಅಧ್ಯಕ್ಷ ಎಚ್.ಎಸ್.ಸುರೇಶ್ ತಿಳಿಸಿದರು.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಕನ್ನಡ ರಾಜ್ಯೋತ್ಸವದ ನಿಮಿತ್ತ ವಿಶೇಷವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸ್ಪರ್ಶ ಆಸ್ಪತ್ರೆಯ ಸಹಯೋಗದಲ್ಲಿ ತಾಲೂಕಿನ ಜನರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ನ.೩೦ರ ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ಪಟ್ಟಣದ ಸತ್ಯಗಣಪತಿ ಮಂಟಪದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಡಾ.ಮೋಹಿತ್ ನಹತ, ನಾರಾಯಣ ನರರೋಗ ಕೇಂದ್ರದ ಡಾ.ಹರಿಪ್ರಸಾದ್ ಚಕ್ರವರ್ತಿ ಹಾಗೂ ಹಿರಿಯ ನೇತ್ರ ತಂತ್ರಜ್ಞ ದಾಸೇಗೌಡ ಸಾರಥ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ, ಮಧುಮೇಹ, ಪಿತ್ತಜನಕಾಂಗ, ದಂತ, ಕ್ಯಾನ್ಸರ್, ಕಿವಿ, ಮೂಗು, ಗಂಟಲು, ಕಣ್ಣು, ಮಾನಸಿಕ ರೋಗ, ಚರ್ಮ ರೋಗ ಮಕ್ಕಳ ತಜ್ಞರು ಈ ಶಿಬಿರದಲ್ಲಿ ಭಾಗವಹಿಸಿ ರೋಗಿಗಳ ತಪಾಸಣೆ ನಡೆಸಲಿದ್ದಾರೆ ಎಂದರು.

ನ ೩೦ರ ಸಾಯಂಕಾಲ ಕಾರ್ಯಕ್ರಮದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಎಸ್.ದೀಪಕ್, ಮಾಜಿ ಶಾಸಕ ಮಸಾಲಾ ಜಯರಾಮ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬೆಮಲ್ ಕಾಂತರಾಜ್, ಸುಬ್ರಮಣಿ ಶ್ರೀಕಂಠೇಗೌಡ, ವಿಜಯಸೇನೆಯ ಅಧ್ಯಕ್ಷ ಅರುಣ್ ಕೃಷ್ಣಯ್ಯ, ತಹಸೀಲ್ದಾರ್ ಎನ್.ಎ.ಕುಂಇ ಅಹಮದ್, ಇಒ ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬಿಇಒ ಸೋಮಶೇಖರ್ ಸೇರಿದಂತೆ ಹಲವಾರು ಮಂದಿ ಆಗಮಿಸಲಿದ್ದಾರೆಂದು ಹೇಳಿದರು.

ವಿಜಯಸೇನೆಯ ತಾಲೂಕು ಕಾರ್ಯಾಧ್ಯಕ್ಷ ಕೃಷ್ಣಮೂರ್ತಿ (ಕಿಟ್ಟಿ), ಕಾರ್ಯದರ್ಶಿ ಕುಮಾರ್, ಸಂಘಟನೆಯ ಪದಾಧಿಕಾರಿಗಳಾದ ಶ್ರೀನಿವಾಸ್, ಪರಮೇಶ್ ಪಟೇಲ್, ಮಹಮದ್ ಹುಸೇನ್, ರಫೀಕ್ ಅಹಮದ್, ಮಹಮದ್ ಇಸ್ಮಾಯಿಲ್, ನೂರ್ ಅಹಮದ್, ಸೈಯದ್ ಮುನ್ನಾವರ್, ಮಹಮದ್ ಆಶಂ, ಶಾಂತ ಮಂಜುನಾಥ್, ಶಂಕರ್, ಜಿ.ಎನ್.ವೆಂಕಟೇಶ್ ಸೇರಿ ಹಲವು ಮುಖಂಡರು ಹಾಜರಿದ್ದರು.

Share this article