ಬ್ಯಾಡಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ನೌಕರರು ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಸೇರಿದಂತೆ ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದಲ್ಲಿ ರಾಜ್ಯದಲ್ಲಿ ಮಾರ್ಚ್ 11ರಿಂದ 15ರ ವರೆಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ, (ತುರ್ತುಸೇವೆ ಮಾತ್ರ) ಮಾರ್ಚ್ 16 ರಿಂದ ಅನಿರ್ದಿಷ್ಟಾವಧಿವರೆಗೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ನ್ಯಾಯಸಮ್ಮತ ಬೇಡಿಕೆ ಈಡೇರಿಸಿ: ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮಾಲತೇಶ ಕಂಬಳಿ, ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧಿ ಪೂರೈಕೆ, ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ, ವೃಂದಗಳ ಜೇಷ್ಠತಾ ಪಟ್ಟಿ ಪ್ರಕಟ, ವರ್ಗಾವಣೆ ಕಾಯ್ದೆಯ ನ್ಯೂನತೆ ಸರಿಪಡಿಸುವುದು, ಕಳೆದ 5 ವರ್ಷಗಳಿಂದ ಬಾಕಿ ಇರುವ ಮುಂಬಡ್ತಿ ನೀಡುವುದು. ಸೇವಾನಿರತ ವೈದ್ಯರು ಮತ್ತು ನೌಕರರಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡುವುದು, ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆ ಭರ್ತಿ, ಗುತ್ತಿಗೆ ಹಾಗೂ ಎನ್‌ಎಚ್‌ಎಂ ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಹೆಚ್ಚಳ ಸೇರಿ ದಂತೆ ನಮ್ಮ ನ್ಯಾಯಸಮ್ಮತವಾದ ಹಲವು ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸುತ್ತಿದೆ ಇದು ಸರಿಯಲ್ಲ ಕೂಡಲೇ ನಮ್ಮ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದರು.ನಮ್ಮ ಮೇಲೆ ದಬ್ಬಾಳಿಕೆ ಸಲ್ಲದು: ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ಮಾತನಾಡಿ, ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಶ್ರಮ ವಹಿಸುತ್ತಿದ್ದಾರೆ, ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳಿಲ್ಲ ಇದರಿಂದ ಸಾರ್ವಜನಿಕರ ಕೆಂಗಣ್ಣಿಗೆ ನಾವು ಗುರಿಯಾಗಬೇಕಿದೆ, ಅಲ್ಲದೇ ಸರಕಾರಿ ನೌಕರರನ್ನ ಟಾರ್ಗೆಟ್ ಮಾಡಿ ವಿವಿಧ ಸಂಘ ಸಂಸ್ಥೆಗಳ ಹೆಸರಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕು, ಅಲ್ಲದೇ ಇದರೊಟ್ಟಿಗೆ ನಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿದರು.ತುರ್ತು ಸೇವೆ ಮಾತ್ರ: ಡಾ.ಚೇತನ ಮಾತನಾಡಿ, ನಮಗೆ ಜನರ ಪ್ರಾಣ ಮುಖ್ಯ ಆದ್ದರಿಂದ ಮುಷ್ಕರ ಮಾಡುತ್ತಿದ್ದರು ಸಹ ನಾವುಗಳು ತುರ್ತು ಚಿಕಿತ್ಸೆ ನೀಡುವ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಆದರೆ ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಮಾತ್ರ ಹಿಂದೆ ಸರಿಯಲ್ಲ ಎಂದರು. ಈ ವೇಳೆ ಡಾ.ನಾಗರಾಜ, ಡಾ. ಮಹೇಶ ಭಜಂತ್ರಿ, ಡಾ.ರಾಮಪ್ಪ, ಪ್ರಶಾಂತ ನವಲೆ, ಬಿದ್ದಾಡೆಪ್ಪ ಸೆದಿಯಣ್ಣನವರ, ಮಾರುತಿ ಕಬ್ಬಾರ, ಜಿಯಾವುಲ್ಲ ಮಲ್ಲೂರ, ವಾಗೀಶ ಬೂದಿಹಾಳಮಠ ಮಮತಾ, ಶೋಭಾ ಲಿಂಗನಗೌಡ್ರ, ಮಲ್ಲಿಕಾರ್ಜುನ, ಚಂದ್ರಶೇಖರ, ನೆಲೋಗಲ್ಲ, ಕಾಶ, ಶಶಿಧರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.