ಕನ್ನಡಪ್ರಭ ವಾರ್ತೆ ಹೊಸದುರ್ಗ
ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಬಳಸುವುದರಿಂದ ಮಾನವನ ಆರೋಗ್ಯದ ಮೇಲೆ ಹೆಚ್ಚಿನ ದುಷ್ಠಪರಿಣಾಮ ಬೀರುತ್ತದೆ ಎಂದು ಕೃಷಿ ಅಧಿಕಾರಿ ಸಿ.ಎಸ್.ಈಶ ಹೇಳಿದರು.ತಾಲೂಕಿನ ಗುತ್ತಿಕಟ್ಟೆ ಗ್ರಾಮದಲ್ಲಿ ನ್ಯಾನೋ ಯೂರಿಯಾ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹರಳು ರೂಪದ ಯೂರಿಯಾ ರಸಗೊಬ್ಬರವನ್ನು ಹೆಚ್ಚಾಗಿ ಬಳಸಿದಾಗ ಬೆಳೆದ ತರಕಾರಿ, ಹಣ್ಣುಗಳು ಮತ್ತು ಧಾನ್ಯಗಳಲ್ಲಿ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿಯಾಗಿ ಹೊಟ್ಟೆ ನೋವು, ಅಜೀರ್ಣ, ವಾಂತಿ ಮುಂತಾದವು ಸಂಭವಿಸಬಹುದು ಹಾಗೂ ಬೆಳೆಗಳಿಗೆ ಕೀಟಬಾಧೆ ಹಾಗೂ ರೋಗಬಾಧೆ ಹೆಚ್ಚಾಗಿ ಕಂಡು ಬರುತ್ತದೆ ಎಂದರು.
ಅತಿಯಾದ ಹರಳು ರೂಪದ ಯೂರಿಯಾ ರಸಗೊಬ್ಬರದ ಬಳಕೆಯಿಂದ ಮಣ್ಣಿನಲ್ಲಿರುವ ಪಿಎಚ್ ಅಂಶ ಕಡಿಮೆ ಮಾಡಿ ಮಣ್ಣನ್ನು ಆಮ್ಲೀಯವಾಗಿಸುತ್ತದೆ. ಈ ಆಮ್ಲೀಯವು ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ ಎಂದರು.ಹರಳು ರೂಪದ ಯೂರಿಯಾ ರಸಗೊಬ್ಬರದ ಬದಲು ದ್ರವ ರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಆದ್ದರಿಂದ ನ್ಯಾನೋ ಯೂರಿಯಾವನ್ನು ಪ್ರತಿ ಲೀಟರ್ ನೀರಿಗೆ 3ರಿಂದ 4 ಎಂ.ಎಲ್ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದರು.
ಇಪ್ಕೋ ಸಂಸ್ಥೆ ವ್ಯವಸ್ಥಾಪಕ ಚಿದಂಬರಂ ಮಾತನಾಡಿ, ನ್ಯಾನೋ ಯೂರಿಯಾ ಬಳಸುವುದರಿಂದ ಬೆಳೆಗೆ ಶೇಕಡ 80ರಷ್ಟು ಉಪಯೋಗವಾಗುತ್ತದೆ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುತ್ತದೆ. ಇದರಿಂದ ಉತ್ತಮ ಗಿಡದ ಬೆಳವಣಿಗೆ ಮತ್ತು ಬೇರುಗಳು ಬೆಳವಣಿಗೆಯಾಗುತ್ತದೆ. ಇದು ಸಸ್ಯಗಳೊಳಗಿನ ಸಾರಜನಕ ಮತ್ತು ಇತರ ಪೋಷಕಾಂಶಗಳನ್ನು ತೆಗೆದುಕೊಳ್ಳುವ ಮತ್ತು ಸಂಯೋಜಿಸುವ ಮಾರ್ಗಗಳನ್ನು ಪ್ರಚೋದಿಸುತ್ತದೆ. ಕಟಾವು ಮಾಡಿದ ಬೆಳೆಗಳಲ್ಲಿ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಿ, ವೆಚ್ಚವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದರು.ಒಂದು ಎಕರೆ ಬೆಳೆಗೆ 500 ಎಂ.ಎಲ್ ದ್ರವ ರೂಪದ ನ್ಯಾನೋ ಯೂರಿಯಾ ಸಾಕಾಗುತ್ತದೆ. 500 ಎಂ ಎಲ್ ನ್ಯಾನೋ ಯೂರಿಯಾದ ಬೆಲೆ ರೂ 225 ಆಗಿದ್ದು, ರೈತ ಭಾಂಧವರು ಹರಳು ರೂಪದ ಯೂರಿಯಾ ಬದಲು ದ್ರವರೂಪದ ನ್ಯಾನೋ ಯೂರಿಯಾ ಬಳಸುವಂತೆ ಕರೆ ನೀಡಿದರು.
ಶಾಸಕ ಬಿಜಿ ಗೋವಿಂದಪ್ಪ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಗುತ್ತಿಕಟ್ಟೆ ಗ್ರಾಮದ ಗ್ರಾಮಸ್ಥರು ಇದ್ದರು.-----------
2025-26ನೇ ಸಾಲಿನ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ರೈತರು ವಿವಿಧ ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ವಿವಿಧ ಬೆಳೆಗಳಿಗೆ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ನೀಡುತ್ತಿದ್ದು, ಹರಳು ರೂಪದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹರಳು ರೂಪದ ಯೂರಿಯಾ ರಸಗೊಬ್ಬರ ಬಳಸುವುದರಿಂದ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತದೆ. ಆದ್ದರಿಂದ ದ್ರವ ರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಉತ್ಪಾದನಾ ವೆಚ್ಚ ಕಡಿಮೆ ಮಾಡಬಹುದು.ಬಿಜಿ ಗೋವಿಂದಪ್ಪ, ಶಾಸಕ, ಹೊಸದುರ್ಗ.