ಧಾರವಾಡ:
ಇಲ್ಲಿಯ ಎಸ್‌ಡಿಎಂ ದಂತ ಕಾಲೇಜಿನ ಸಾಮೂಹಿಕ ದಂತ ಚಿಕಿತ್ಸಾ ವಿಭಾಗದ ವತಿಯಿಂದ ಬುಧವಾರ ರಾಷ್ಟ್ರೀಯ ಸಾಮೂಹಿಕ ಆರೋಗ್ಯ ದಂತ ಚಿಕಿತ್ಸಾ ದಿನ ಆಚರಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ್ ಮಾತನಾಡಿ, ಎಸ್‌ಡಿಎಂ ಆಸ್ಪತ್ರೆ ಸಮುದಾಯದ ಆರೋಗ್ಯ ಸುಧಾರಣೆಯ ಕಾರ್ಯ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಮತ್ತು ಜನರಿಗೆ ಬಾಯಿಯ ಆರೋಗ್ಯ ಸಮಸ್ಯೆ ಪತ್ತೆ ಹಚ್ಚುವಲ್ಲಿ ಸಂಸ್ಥೆಯ ಶಿಬಿರಗಳು ಸಹಕಾರಿಯಾಗಿವೆ. ಜತೆಗೆ ಸಂಚಾರಿ ಆಸ್ಪತ್ರೆಯು ಸಹಕಾರಿಯಾಗಿದೆ ಎಂದರು. ಆರೋಗ್ಯದ ಮಹತ್ವದ ಬಗ್ಗೆ ಸಮುದಾಯಕ್ಕೆ ತಿಳಿಸಲು ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.ಎಸ್‌ಡಿಎಂ ವಿವಿ ಉಪಕುಲಪತಿ ಡಾ. ನಿರಂಜನ್ ಕುಮಾರ ಮಾತನಾಡಿ, ದಂತ ಕಾಲೇಜಿನ ಈ ವಿಭಾಗವು ಧಾರವಾಡದ ಸುತ್ತಮುತ್ತಲಿನ 17 ತಾಲೂಕುಗಳಲ್ಲಿ ಸಂಚಾರಿ ಚಿಕಿತ್ಸಾಲಯದ ಮೂಲಕ ಬಾಯಿಯ ಆರೋಗ್ಯದ ಕುರಿತು ಜಾಗೃತಿ, ಚಿಕಿತ್ಸೆ ನೀಡಿದೆ. ಇತ್ತೀಚಿಗೆ 75 ಶಿಬಿರಗಳಲ್ಲಿ 12 ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಮತೋಲನ ಆಹಾರದ ಮೇಲೆ ಅದರಲ್ಲೂ ಗರ್ಭಿಣಿಯರಿಗೆ ಆಶಾ ಕಾರ್ಯಕರ್ತೆಯರು ವಿಶೇಷವಾಗಿ ಅವರ ಆರೋಗ್ಯದ ಉನ್ನತಿಗಾಗಿ ಗಮನಹರಿಸುತ್ತಾರೆ. ಆಶಾ ಕಾರ್ಯಕರ್ತೆಯರು ಸಮುದಾಯದಲ್ಲಿ ತಂಬಾಕು ಸೇವನೆಯಿಂದ ಆಗುವ ಸಮಸ್ಯೆಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದರು.ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಡಾ. ಶೋದನ, ಡಾ. ಹೇಮಾ ತಂಬಾಕ ಸೇವನೆಯಿಂದಾಗುವ ದುಷ್ಪರಿಣಾಮ ವಿವರಿಸಿದರು. ಡಾ. ಜೆಬಾ ಶೇಖ್ ನಿರೂಪಿಸಿದರು. ವಿಭಾಗದ ಮುಖ್ಯಸ್ಥ ಡಾ. ರವಿ ಶಿರಹಟ್ಟಿ ಸ್ವಾಗತಿಸಿದರು. ಡಾ. ಅಕ್ಷತಾ ಅಗ್ನಿಹೋತ್ರಿ ಪರಿಚಯಿಸಿದರು. ಡಾ. ಪ್ರೀತಾ ಶೆಟ್ಟಿ ವಂದಿಸಿದರು. 150ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.