ಅಂಚೆ ಇಲಾಖೆ ಸಹಭಾಗಿತ್ವ । ಕಟೀಲು ಏಳೂ ಮೇಳಗಳ ಕಲಾವಿದರ ಸಮಾವೇಶಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಮೇಳಗಳ ಎಲ್ಲ ಕಲಾವಿದರಿಗೆ ಈ ಬಾರಿ ಅಂಚೆ ಇಲಾಖೆಯ ಅಪಘಾತ ವಿಮೆಯ ಜೊತೆಗೆ 2 ಲಕ್ಷ ರು.ಗಿಂತ ಮೇಲ್ಪಟ್ಟ 15 ಲಕ್ಷ ರು.ವರೆಗಿನ ಆರೋಗ್ಯ ವಿಮೆಯನ್ನೂ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ಮಾಡಲಾಗುವುದು ಎಂದು ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಪ್ರಕಟಿಸಿದ್ದಾರೆ.ಕಟೀಲು ಸರಸ್ವತೀ ಸದನದಲ್ಲಿ ಕಟೀಲು ದೇವಳದ 7ನೆಯ ಮೇಳದ ಪಾದಾರ್ಪಣೆಯ ಅಂಗವಾಗಿ ನಡೆದ ಯಕ್ಷಸಪ್ತಾಹದ ಆರನೆಯ ದಿನ ಗುರುವಾರ ನಡೆದ ಕಲಾವಿದರ ಸಮಾವೇಶದಲ್ಲಿ, ಅಪಘಾತದಲ್ಲಿ ಮೃತಪಟ್ಟ ದಿ. ಆನಂದ ಅವರ ಪತ್ನಿಗೆ ಅಪಘಾತ ವಿಮೆಯ ಪರಿಹಾರ ಧನ ರು. ೧೦ಲಕ್ಷವನ್ನು ವಿತರಿಸಿ ಮಾತನಾಡಿದರು. ಎಲ್ಲಾ ಕಲಾವಿದರಿಗೆ ಅಪಘಾತ ವಿಮೆ ಮಾಡಿದ ಮೊದಲ ಮೇಳ ಕಟೀಲು ಆಗಿದ್ದು, ಇದೀಗ ಅಂಚೆ ಇಲಾಖೆಯ ಆರೋಗ್ಯ ವಿಮೆಯನ್ನೂ ಮಾಡುತ್ತಿರುವ ಮೊದಲ ಮೇಳ ಕಟೀಲು ಆಗಿದೆ ಎಂದು ಅಂಚೆ ಇಲಾಖೆಯ ಮಾರುಕಟ್ಟೆ ಕಾರ್ಯನಿರ್ವಾಹಕ ಸುಭಾಷ್ ಸಾಲಿಯಾನ್ ತಿಳಿಸಿದರು.ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಪರಂಪರೆ, ಗುಣಮಟ್ಟದ ಪ್ರದರ್ಶನ ನೀಡುವಲ್ಲಿ ಕಲಾವಿದರು ಅಧ್ಯಯನಶೀಲರಾಗಬೇಕು. ಯುವ ಕಲಾವಿದರು ಮಾತುಗಾರಿಕೆಯಲ್ಲಿ ತಯಾರಾಗಲು ತಾಳಮದ್ದಲೆಗಳಂತಹ ಅವಕಾಶಗಳನ್ನು ನೀಡಲಾಗುವುದು ಎಂದು ಹೇಳಿದರು.ಆರೋಗ್ಯದ ಬಗ್ಗೆ ಡಾ. ಶಶಿಕುಮಾರ್, ಕಲಾವಿದರ ಬದ್ಧತೆಯ ಬಗ್ಗೆ ಕಲಾರಂಗದ ಮುರಳಿ ಕಡೇಕಾರ್, ಪ್ರದರ್ಶನದ ಗುಣಮಟ್ಟದ ಕುರಿತು ಕಟೀಲು ಲಕ್ಷ್ಮೀನಾರಾಯಣ ಭಟ್ ಮಾಹಿತಿ ನೀಡಿದರು.ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀದೇವೀಕುಮಾರ ಆಸ್ರಣ್ಣ, ಪುಷ್ಪರಾಜ ಕುಕ್ಕಾಜೆ, ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ ಮಲ್ಯ, ಪಿ.ದಿನೇಶ್ ಮತ್ತಿತರರಿದ್ದರು.
ಕಲಾವಿದರ ಪರವಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವ ಭಾಗ್ಯ ನಮಗೆಲ್ಲ ಸಿಕ್ಕಿದ್ದು ಮೇಳದ ಯಜಮಾನರು ಕಾರ್ಯಾಗಾರ, ಸವಲತ್ತು, ಸಮಾವೇಶ, ವಿಮೆ ಹೀಗೆ ಎಲ್ಲ ಸೌಕರ್ಯಗಳನ್ನು ಮಾಡಿಕೊಡುತ್ತಿರುವಾಗ ಪ್ರೀತಿ ಮತ್ತು ಭಕ್ತಿಯಿಂದ ನಾವು ಮೇಳದಲ್ಲಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿಯನ್ನು ಅರಿತುಕೊಂಡು ಕಟೀಲು ಕ್ಷೇತ್ರದ ಗೌರವವನ್ನು ಹೆಚ್ಚಿಸಬೇಕಾಗಿದೆ ಎಂದರು.ರವಿ ಮುಂಡಾಜೆ, ದಿನಕರ ಗೋಖಲೆ ಮುಂತಾದವರು ಕಲಾವಿದರ ಪರವಾಗಿ ಮಾತನಾಡಿದರು. ಗುರುತೇಜ ಕೃಷ್ಣ ನಿರೂಪಿಸಿದರು. ಗಣೇಶ ಕನ್ನಡಿಕಟ್ಟೆ ಸ್ವಾಗತಿಸಿದರು. ಶ್ರುತಕೀರ್ತಿರಾಜ ವಂದಿಸಿದರು.ಕ್ಯಾಪ್ಸ್ ಫೌಂಡೇಷನ್ ಸಿಎ ಚಂದ್ರಶೇಖರ ಶೆಟ್ಟಿ ವತಿಯಿಂದ ಕಟೀಲು ಮೇಳ ಹಾಗೂ ದೇವಳದ ಸಿಬಂದಿಗಳಿಗೆ ಟೀ ಶರ್ಟ್ ಹಾಗೂ ಬಟ್ಟೆ ಚೀಲಗಳನ್ನು ವಿತರಿಸಲಾಯಿತು.ಹಿರಿಯ ಕಲಾವಿದರ ಉಪಸ್ಥಿತಿ:ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕೋಳ್ಯೂರು ರಾಮಚಂದ್ರ ರಾವ್, ರೆಂಜಾಳ ರಾಮಕೃಷ್ಣ ರಾವ್,ಮುಂಡ್ಕೂರು ಜಯರಾಮ ಶೆಟ್ಟಿ, ಕುರಿಯ ಗಣಪತಿ ಶಾಸ್ತ್ರಿ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಇರಾ ಭಾಗವತರ ಪುತ್ರ ಜಯರಾಮ ರಾವ್ ಮತ್ತಿತರರು ಉಪಸ್ಥಿತರಿದ್ದರು.