ಹೊಸಪೇಟೆ: ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಎಷ್ಟೇ ಆಸ್ತಿ ಅಂತಸ್ತು, ಹಣ ಸಂಪಾದನೆ ಮಾಡಿದರೂ ವೃದ್ಧಾಪ್ಯದಲ್ಲಿ ಅವನ ಕೈ ಹಿಡಿಯುವುದು ಕೇವಲ ಆತ ಕಾಪಾಡಿಕೊಂಡು ಬಂದ ಉತ್ತಮ ಆರೋಗ್ಯ ಮಾತ್ರ. ಹೀಗಾಗಿ ಪ್ರತಿಯೊಬ್ಬರು ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಇ ಬಾಲಕೃಷ್ಣ ಕರೆ ನೀಡಿದರು.
ಈ ಬಾರಿಯ ಯೋಗ ದಿನಾಚರಣೆಯು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯಿಂದ ಯೋಗ ದಿನಾಚರಣೆ ಆರಂಭವಾಗಿ ಇಂದಿಗೆ ಯಶಸ್ವಿಯಾಗಿ 12 ವರ್ಷಗಳು ಸಂದಿವೆ. ಯೋಗ ಎಂಬುದು ಕೇವಲ ಒಂದು ದಿನದ ಪ್ರದರ್ಶನವಲ್ಲ. ಇದು ನಮ್ಮ ಸನಾತನ ಋಷಿಮುನಿಗಳು ಜಗತ್ತಿಗೆ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಯೋಗ ಅತ್ಯಂತ ಪ್ರಮುಖ ದಾರಿಯಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶಕುಮಾರ್ ಮಾತನಾಡಿ, ಯೋಗ ಎಂಬುವುದು ಕೇವಲ ದೈಹಿಕ ಕಸರತ್ತಲ್ಲ, ಅದು ನಮ್ಮ ಜೀವನದ ಭಾಗವಾಗಬೇಕು. ಯೋಗದಿಂದ ರೋಗಮುಕ್ತಿ ಎಂಬ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರಿಂದ ನಮ್ಮ ಆಯಸ್ಸು ಹೆಚ್ಚಾಗುವುದಲ್ಲದೆ, ಗಂಭೀರ ಕಾಯಿಲೆಗಳಿಂದ ಐಸಿಯು ಸೇರುವ ಪರಿಸ್ಥಿತಿಗಳನ್ನು ತಪ್ಪಿಸಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯಬಾರದು ಎಂದ ಅವರು, ಇಂದಿನ ಧಾವಂತದ ಒತ್ತಡ ಜೀವನದಲ್ಲಿ ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಯೋಗಗುರು ಬಾಲಚಂದ್ರ ಶರ್ಮಾ ಯೋಗ ತರಬೇತಿ ನೀಡಿದರು. ಯೋಗ ದಿನಾಚರಣೆಯಲ್ಲಿ ಸುಮಾರು 2000ಕ್ಕೂ ಅಧಿಕ ಸಂಖ್ಯೆಯಲ್ಲಿ ಯೋಗಾಸಕ್ತರು, ಯೋಗ ಪಟುಗಳು ಹಾಗೂ ಸಾರ್ವಜನಿಕರು ಶಿಸ್ತುಬದ್ಧವಾಗಿ ಯೋಗಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.