ಹೊನ್ನಾಳಿ: ರಕ್ತದಾನ ಮಾಡುವುರಿಂದ ರೋಗಿಗಳಿಗಷ್ಟೆ ಅಲ್ಲದೆ ರಕ್ತದಾನ ಮಾಡಿದವರೂ ಕೂಡ ಮತ್ತಷ್ಟು ಆರೋಗ್ಯವಂತರಾಗುತ್ತಾರೆ, ವಿಶೇಷವಾಗಿ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಆರೋಗ್ಯ ಮತ್ತಷ್ಟು ದೃಢವಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಮಂಗಳವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 99ನೇ ಜಯಂತಿ ಅಂಗವಾಗಿ ತಾಲೂಕು ಬಿಜೆಪಿ, ದಾವಣಗೆರೆ ಆರೈಕೆ ಆಸ್ಪತ್ರೆ ಹಾಗೂ ಬ್ಲಡ್ ಬ್ಯಾಂಕ್ ಸಹಯೋಗದಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ, ನಾವು ಕೊಡುವ ರಕ್ತದಿಂದ ಒಂದು ಜೀವ ಉಳಿದಾಗ ಆಗುವ ಸಂತೋಷ ಅನುಭವಿಸುವುದೇ ಒಂದು ತರಹದ ಆನಂದ. ರಕ್ತದ ಅವಶ್ಯಕತೆ ಕಂಡಾಗ ಹಿಂದು ಮುಂದು ನೋಡಬೇಡಿ ಎಂದು ಮನವಿ ಮಾಡಿದರು.ನಿಯಮಿತ ರಕ್ತದಾನದಿಂದ ಕಬ್ಬಿಣ ಅಂಶ ಸಮತೋಲನದಲ್ಲಿರುತ್ತದೆ ಹಾಗೂ ಹೃದಯಾಘಾತ ತಪ್ಪಿಸುತ್ತದೆ. ಬಹು ಮುಖ್ಯವಾಗಿ ವಿವಿಧ ರೀತಿ ಕ್ಯಾನ್ಸರ್ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ತಿಳಿಸಿದರು.
ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಮಾತನಾಡಿ, ಆರೋಗ್ಯವಂತ ವ್ಯಕ್ತಿ 450 ಎಂ.ಎಲ್ ರಕ್ತದಾನ ಮಾಡಬಹುದು. ಪರುಷರು ಪ್ರತಿ ಮೂರು ತಿಂಗಳಿಗೊಮ್ಮೆ ಹಾಗೂ ಸ್ತ್ರೀಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತ ಕೊಟ್ಟ ವ್ಯಕ್ತಿ ದೇಹ ಮತ್ತಷ್ಟು ಸದೃಢವಾಗುತ್ತದೆ. ರಕ್ತದಾನ ಮಾಡುವುದರಿಂದ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬ ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ ಎಂದು ತಿಳಿ ಹೇಳಿದರು.36 ಜನ ಯುವಕರು ರಕ್ತದಾನ ಮಾಡಿದರು, ಸಂಗ್ರಹವಾದ ರಕ್ತವನ್ನು ಆರೈಕೆ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ಜೆ.ಕೆ. ಸುರೇಶ್, ನೆಲಹೊನ್ನೆ ಮಂಜುನಾಥ್, ಕೆ.ಪಿ. ಕುಬೇರಪ್ಪ ಮಾತನಾಡಿದರು. ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಡಿ.ಜಿ. ರಾಜಪ್ಪ, ದಿಡಗೂರು ಪಾಲಕ್ಷಪ್ಪ, ಬೀರಪ್ಪ, ನಾಗರಾಜ್, ಸರಳಿಮನೆ ಮಂಜುನಾಥ್, ಶಿವುಹುಡೇದ್, ನವೀನ್, ಚಂದ್ರು ಹಾಗೂ ಇತರರು ಇದ್ದರು.