ಆಂತರಿಕ, ಬಾಹ್ಯ ಪರಿಸರ ಚೆನ್ನಾಗಿದ್ರೆ ಆರೋಗ್ಯ ಚೆನ್ನ: ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ

KannadaprabhaNewsNetwork | Published : Jun 10, 2024 12:30 AM

ಸಾರಾಂಶ

ಸಾಣೇಹಳ್ಳಿ ಶಿವಕುಮಾರ ವನದಲ್ಲಿ ಮಹಾಗನಿ, ಹಲಸು, ನೇರಲ, ಹೊಂಗೆ ಮುಂತಾದ 400 ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಆಂತರಿಕ ಪರಿಸರದಲ್ಲಿ ಒಳ್ಳೆಯ ಆಲೋಚನೆಗಳಿದ್ದರೆ ಬಾಹ್ಯ ಪರಿಸರ ಸ್ವಚ್ಛಗೊಳ್ಳಲು ಸಾಧ್ಯ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿ ಶ್ರೀಮಠದ ಆವರಣದಲ್ಲಿರುವ ಶಿವಕುಮಾರ ವನದಲ್ಲಿ ಗಿಡ ನೆಟ್ಟು, ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ, ಆಂತರಿಕ ಪರಿಸರದ ಶುದ್ಧಿಯೇ ಬಾಹ್ಯ ಪರಿಸರದ ಶುದ್ಧಿಗೆ ಸಹಕಾರಿಯಾಗುತ್ತದೆ. ಮನುಷ್ಯ ಮೊದಲು ಕೊಳಕು ಜೀವನ ಕಳೆದುಕೊಳ್ಳಬೇಕು ಎಂದರು.

ನಮ್ಮ ಆಲೋಚನೆ, ಭಾವನೆ, ನಮ್ಮ ಬದುಕಿನ ವಿಧಾನ ಚೆನ್ನಾಗಿದ್ದರೆ ಬಾಹ್ಯ ಪರಿಸರ ಚೆನ್ನಾಗಿರುತ್ತದೆ. ನಮ್ಮ ಆಂತರಿಕ ಮತ್ತು ಬಾಹ್ಯ ಪರಿಸರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಆಯಸ್ಸು ಹೆಚ್ಚಾಗುತ್ತದೆ. ಆಯಸ್ಸು ಹೆಚ್ಚಾದರೆ ಆಗ ಉತ್ತಮ ಕೆಲಸ ಕಾರ್ಯ ಮಾಡಲು ಸ್ಪೂರ್ತಿ ದೊರೆಯುವುದು ಎಂದರು.

ವಿದ್ಯಾರ್ಥಿಗಳು, ಮಕ್ಕಳು ಸ್ವಾಭಾವಿಕವಾಗಿ ಪ್ಯಾಕೆಟ್ ಆಕರ್ಷಣೆಗೆ ಒಳಗಾಗಿ ಅದರಲ್ಲಿರುವ ಪದಾರ್ಥ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ಯಾಕೆಟ್‌ ಆಹಾರ ಪದಾರ್ಥ ಸಂಪೂರ್ಣವಾಗಿ ನಿಷೇಧ ಮಾಡುವ ಸಂಕಲ್ಪ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಮ್ಮ ಪರಿಸರ ಒಂದು ದಿನಕ್ಕೆ ಸ್ವಚ್ಛಗೊಳ್ಳುವಂಥದ್ದಲ್ಲ. ಅದು ವರ್ಷದುದ್ದಕ್ಕೂ ಮಾಡಬೇಕಾದ ಕಾರ್ಯ. ಪ್ರತಿಕ್ಷಣವೂ ಪರಿಸರದ ಪ್ರಜ್ಞೆ ನಮಗಿದ್ದರೆ ಶುಚಿತ್ವ ಕಾಪಾಡಿಕೊಳ್ಳಲಿಕ್ಕೆ ಸಾಧ್ಯ. ಮಳೆ, ಬೆಳೆ ಚೆನ್ನಾಗಿ ಆಗಬೇಕೆಂದರೆ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಲು ಮುಂದಾಗಬೇಕು. ಸಾಣೇಹಳ್ಳಿ ಶಿವಕುಮಾರ ವನದಲ್ಲಿ ನಮ್ಮ ಸಮ್ಮುಖದಲ್ಲಿಯೇ ಕಳೆದ ನಾಲ್ಕಾರು ದಿನಗಳಿಂದ ಮಹಾಘನಿ, ಮಾವು, ತೇಗ, ನೇರಳೆ, ಹತ್ತಿ, ಪೇರಲ, ಸಂಪಿಗೆ, ಹಲಸು ವಿವಿಧ ಜಾತಿ ಸುಮಾರು 1500 ಗಿಡಗಳನ್ನು ನಮ್ಮ ಶಾಲಾ ಮಕ್ಕಳು ಶ್ರಮದಾನದ ಮೂಲಕ ನೆಟ್ಟಿದ್ದಾರೆ. ಅಲ್ಲದೆ ಕಳೆದ ವರ್ಷ ನೆಡಿಸಿದ್ದ ಸಾವಿರಾರು ಗಿಡ-ಮರಗಳಿಗೆ ಸೂಕ್ತ ಮಣ್ಣು, ನೀರು, ಗೊಬ್ಬರ ಮುಂತಾದ ಪೋಷಕಾಂಶ ಒದಗಿಸಿದ್ದಾರೆ. ಈ ಎಲ್ಲ ಗಿಡ ನಳನಳಿಸುತ್ತಿದ್ದು ನಿರೀಕ್ಷೆಗೂ ಮೀರಿದ ಬೆಳವಣಿಗೆ ಹೊಂದಿ ನೋಡುಗರ ಕಣ್ಮನ ಸೆಳೆಯುತ್ತಿವೆ. ನಮ್ಮ ಶಾಲಾ ಮಕ್ಕಳು ಸ್ವಯಂಪ್ರೇರಿತರಾಗಿ ಕಳೆದ ಒಂದು ವಾರದಿಂದ ಸತತವಾಗಿ ಪರಿಶ್ರಮಪಟ್ಟಿರುವುದು ನಮಗೆ ಅತ್ಯಂತ ಖುಷಿ ತಂದಿದೆ ಎಂದರು.

ಅಧ್ಯಾಪಕರಾದ ಮಲ್ಲಿಕಾರ್ಜುನ, ವಿ.ಬಿ.ಚಳಗೆರೆ, ಶಿವಕುಮಾರ್. ಬಿ.ಎಸ್ ಮಾತನಾಡಿದರು. ಅಧ್ಯಾಪಕಿ ಸುಧಾ ಎಂ, ಸ್ವಾಗತಿಸಿ ನಿರೂಪಿಸಿದರು. ತೋರಣ ಪ್ರಾರ್ಥಿಸಿದರು. ಶ್ರೀ ಶಿವಕುಮಾರ ವನದಲ್ಲಿ ಮಹಾಗನಿ, ಹಲಸು, ನೇರಲ, ಹೊಂಗೆ ಮುಂತಾದ 400 ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಬಸವರಾಜ್, ಶಿಲ್ಪಾ, ಉಭಯ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article