ಬ್ಯಾಡಗಿ: ದೀರ್ಘ ಕಾಲದ ರೋಗವಷ್ಟೇ ಅನಾರೋಗ್ಯ ಲಕ್ಷಣವಲ್ಲ. ಆದರೆ, ದೈಹಿಕವಾಗಿ ದೃಢತೆ, ಮಾನಸಿಕವಾಗಿ ಸ್ಥಿರತೆ ಉತ್ತಮ ಆರೋಗ್ಯದ ಲಕ್ಷಣಗಳಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನದಂತೆ ಆರೋಗ್ಯವು ತೃಪ್ತಿಕರ ಜೀವನಕ್ಕೆ ಉತ್ತಮ ಅಡಿಪಾಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ ಅಭಿಪ್ರಾಯಪಟ್ಟರು.
ದೈಹಿಕ ಚೈತನ್ಯ ಕಳೆದುಕೊಳ್ಳಬೇಡಿ: ಉತ್ತಮ ಆರೋಗ್ಯವು ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇತ್ತೀಚೆಗೆ ಮನುಷ್ಯ ರೂಢಿಸಿಕೊಳ್ಳುತ್ತಿರುವ ಆಲಸ್ಯತನವೂ ಕೂಡ ಅನಾರೋಗ್ಯದ ಪ್ರಮುಖ ಲಕ್ಷಣವಾಗಿದೆ. ಹಾಗಾಗಿ ಪ್ರತಿನಿತ್ಯ ದೈಹಿಕವಾಗಿ ತೀವ್ರ ಚಟುವಟಿಕೆ ಹಾಗೂ ಲವಲವಿಕೆಗಳಿಂದ ಇರಬೇಕಾಗುತ್ತದೆ ಎಂದರು.
ಮಾನಸಿಕ ಸ್ಥಿತಿಸ್ಥಾಪಕತ್ವ: ಡಾ. ಕಿಶೋರ ಮಾತನಾಡಿ, ಮಾನಸಿಕ ಆರೋಗ್ಯವು ಯೋಗಕ್ಷೇಮದ ಅವಿಭಾಜ್ಯವಾಗಿದೆ. ನಿತ್ಯ ಒತ್ತಡದ ಬದುಕನ್ನು ನಿಭಾಯಿಸಲು ನಾವು ಮೊದಲು ಮಾನಸಿಕವಾಗಿ ಪ್ರಬಲವಾಗಿರಬೇಕು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳನ್ನು ಕೂಡ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.ಆರ್ಥಿಕ ಸ್ಥಿರತೆ ಕಳೆದುಕೊಳ್ಳುತ್ತೇವೆ: ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ ಮಾತನಾಡಿ, ನಿತ್ಯವೂ ಆಸ್ಪತ್ರೆಗಳಿಗೆ ಹಣ ವ್ಯಯಿಸುವುದರಿಂದ ಮನುಷ್ಯನಿಗೆ ಆರ್ಥಿಕ ಹೊರೆಯಾಗಲು ಕಾರಣವಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಜನರು ಆಸ್ಪತ್ರೆಗಳಿಗೆ ಹಣ ವ್ಯಯಿಸಲಾಗದೇ ಇದ್ದಂತಹ ಆಸ್ತಿಗಳನ್ನು ಮಾರಾಟ ಮಾಡಿದ ಉದಾಹರಣೆಗಳಿದ್ದು, ಹೀಗಾಗಿ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯವಾಗಿರುವಂತೆ ಕರೆ ನೀಡಿದರು.