ಕುಕನೂರು: ವಿದ್ಯಾರ್ಥಿಗಳು ಆರೋಗ್ಯದ ದೃಷ್ಟಿಯಿಂದ ದೇಶಿಯ ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಇರಕಲ್ಲಗಡ ಪ್ರಾಂಶುಪಾಲ ಹನುಮಂತಗೌಡ ಎಂ. ಗುಡಿಹಿಂದಿನ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ತಳಬಾಳ ಪ್ರಾಚಾರ್ಯ ಡಾ. ಈ.ಆರ್. ಲಗಳೂರ ಮಾತನಾಡಿ, ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೋಡಗಿಸಿಕೊಂಡರೆ ಹಾಲು ಜೇನು ಇದ್ದ ಹಾಗೆ. ಕ್ರೀಡಾಕೂಟ ಗೆಲುವು ಸೋಲಿನಾಚೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು, ತಾಳ್ಮೆ, ನಾಯಕತ್ವ ಹಾಗೂ ಸವಾಲುಗಳನ್ನು ಎದುರಿಸುವ ಮನೋಭಾವ ಬೆಳೆಸುವ ವೇದಿಕೆಯಾಗಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಮಲಕಸಾಬ ನೂರಬಾಷಾ, ಪಿಡಿಒ ರಮೇಶ ತಿಮ್ಮರಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಕ್ರಿಯವಾಗಿ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳಲ್ಲಿ ಅನೇಕ ಬಗೆಯ ಪ್ರತಿಭೆ ಇರುತ್ತದೆ. ಅದನ್ನು ಹೊರಹಾಕುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಐಕ್ಯೂಎಸಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ನಾಗರತ್ನಾ ತಮ್ಮಿನಾಳ ಮಾತನಾಡಿದರು. 8 ತಂಡಗಳು ಪಾಲ್ಗೊಂಡಿದ್ದವು. ಇರಕಲಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ, ಕೊಪ್ಪಳ ನಗರದ ಶ್ರೀ ಗವಿಸಿದ್ಧೇಶ್ವರ ಕಾಲೇಜು ದ್ವೀತಿಯ ಸ್ಥಾನ ಪಡೆದು ಸಂಭ್ರಮಿಸಿತು. ನಿರ್ದೇಶಕ ವೀರಭದ್ರಯ್ಯ ಮನ್ನಾಪುರ, ಕೊಪ್ಪಳ ವಿವಿ ಕ್ರೀಡಾ ಸಂಯೋಜಕ ಡಾ. ಮಂಜುನಾಥ ಆರೆಂಟನೂರ, ದೈಹಿಕ ನಿರ್ದೇಶಕರ ಸಂಘದ ಅಧ್ಯಕ್ಷೆ ಶೋಭಾ ಕೆ.ಎಸ್., ವಾಣಿಜ್ಯ ಶಾಸ್ತ್ರ ಮುಖ್ಯಸ್ಥ ಪ್ರೊ. ಸುರೇಶಕುಮಾರ, ತಳಬಾಳ ದೈಹಿಕ ನಿರ್ದೇಶಕ ಲಕ್ಷ್ಮಣ ಹುಲ್ಲೂರ, ವಸತಿ ನಿಲಯ ಪಾಲಕ ಮಾರುತಿ ಜೀವಣ್ಣವರ ಇದ್ದರು. ಸಂಗಪ್ಪ ಬ್ಯಾಳಿ ಕಾರ್ಯಕ್ರಮ ನಿರೂಪಿಸಿದರು. ಸಿಂಧೂರ ಲಕ್ಷ್ಮಣ ವಂದಿಸಿದರು.