ಆರೋಗ್ಯದಿಂದ ನೆಮ್ಮದಿಯ ಬದುಕು: ಜಿಲ್ಲಾ ಪಂಚಾಯಿತಿ ಸಿಇಒ ಚಾಲನೆ

KannadaprabhaNewsNetwork | Published : Apr 28, 2025 12:46 AM

ಸಾರಾಂಶ

ಆರೋಗ್ಯಕ್ಕಿಂತ ಯಾವುದು ಮುಖ್ಯವಲ್ಲ. ಆರೋಗ್ಯಕ್ಕೆ ಮಹತ್ವ ನೀಡಿದರೆ ಕ್ರಿಯಾಶೀಲರಾಗಿ ಕೆಲಸ ಮಾಡಬಹುದು. ಜತೆಗೆ ಕುಟುಂಬವನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡು ಹೋಗಬಹುದು.

ಹಾವೇರಿ: ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡು, ನೆಮ್ಮದಿಯ ವೃತ್ತಿ ಜೀವನ ನಡೆಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರುಚಿ ಬಿಂದಲ್ ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 2025- 26ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಎರಡು ದಿನದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಆರೋಗ್ಯಕ್ಕಿಂತ ಯಾವುದು ಮುಖ್ಯವಲ್ಲ. ಆರೋಗ್ಯಕ್ಕೆ ಮಹತ್ವ ನೀಡಿದರೆ ಕ್ರಿಯಾಶೀಲರಾಗಿ ಕೆಲಸ ಮಾಡಬಹುದು. ಜತೆಗೆ ಕುಟುಂಬವನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡು ಹೋಗಬಹುದು. ಒತ್ತಡದ ವೃತ್ತಿ ಜೀವನದಲ್ಲಿ ಪ್ರತಿ ನೌಕರರು ವ್ಯಾಯಾಮ ಮತ್ತು ವಾಯುವಿಹಾರಕ್ಕೆ ಸಮಯ ಮೀಸಲಿಡಬೇಕು ಎಂದರು. ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಿದರೆ, ಅನಾರೋಗ್ಯ ನಿಮ್ಮ ಬಳಿ ಸುಳಿಯುವುದಿಲ್ಲ. ಇನ್ನೂ ಕ್ರೀಡೆಯಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಎಲ್ಲರೂ ಸಂತಸ, ಉತ್ಸಾಹದಿಂದ ಎರಡು ದಿನ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಸದಾ ನಗು- ನಗುತಾ ಇರಬೇಕು. ಕೆಲಸ ಮಾಡಬೇಕು ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಎರಡು ದಿನಗಳ ಕಾಲ ಕ್ರೀಡೆಯಲ್ಲಿ ಭಾಗವಹಿಸೋಣ. ಮಾನಸಿಕ, ದೈಹಿಕವಾಗಿ ಸದೃಢವಾಗಲು ಕ್ರೀಡೆ ಸಹಕಾರಿಯಾಗಿದೆ. ಸ್ಪರ್ಧೆ ಆರೋಗ್ಯಕರವಾಗಿರಲಿ, ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಿ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಲತಾ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಪಂ, ತಾಪಂ, ಗ್ರಾಪಂ ಸಿಬ್ಬಂದಿ ಇದ್ದರು. ಅನಧಿಕೃತ ಖಾಸಗಿ ಕ್ಲಿನಿಕ್ ಜಪ್ತಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ಹಾಗೂ ಮೋಟೆಬೆನ್ನೂರಲ್ಲಿ ಇತ್ತೀಚೆಗೆ ಅನಿರೀಕ್ಷಿತ ದಾಳಿ ನಡೆಸಿದ ಅರೋಗ್ಯ ಇಲಾಖೆ ಅಧಿಕಾರಿಗಳು ಅನಧಿಕೃತ ಕ್ಲಿನಿಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬ್ಯಾಡಗಿಯ ಸ್ಕಂದ ಹೋಮಿಯೋಪಥಿ ಕ್ಲಿನಿಕ್‌ನ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಧಿಕೃತ ಖಾಸಗಿ ಕ್ಲಿನಿಕ್‌ಗಳ ತಪಾಸಣೆ ನಡೆಸಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರ ಶಂಕ್ರಿಪುರ ಉಪಕೇಂದ್ರ ಮೋಟೆಬೆನ್ನೂರ(ಬಿ) ಇಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ(ಸಿಎಚ್‌ಒ) ಸೇವೆ ಸಲ್ಲಿಸುತ್ತಿರುವ ಸತ್ಯಪ್ಪ ಬುಸಾಳಿ ನಿಗದಿತ ವೈದ್ಯಕೀಯ ವಿದ್ಯಾರ್ಹತೆ ಪಡೆಯದೇ ವೈದ್ಯ ವೃತ್ತಿ ನಡೆಸುತ್ತಿರುವುದು ಕಂಡುಬಂದಿದೆ. ಬ್ಯಾಡಗಿ ತಾಲೂಕಿನ ವ್ಯಾಪ್ತಿಯಲ್ಲಿ ವೈದ್ಯಕೀಯ ವಿದ್ಯಾರ್ಹತೆಯನ್ನು ಹೊಂದಿದ್ದರೂ ಶಾರದಾ ಹಾಸ್ಪಿಟಲ್, ರೇಣುಕಾ ಕ್ಲಿನಿಕ್ ಎಂಬ ಹೆಸರಿನಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಜಪ್ತಿ ಮಾಡಲಾಗಿದೆ.ಈ ವೇಳೆ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೇವರಾಜ್ ಎಸ್., ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ, ಸಹಾಯಕ ಔಷಧ ನಿಯಂತ್ರಕ ಸಂಗಣ ಶಿಳ್ಳಿ ಹಾಗೂ ಬ್ಯಾಡಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ ಇತರರು ಇದ್ದರು.

Share this article