ಯಲ್ಲಾಪುರ: ಪತಂಜಲಿ ಮಹರ್ಷಿಗಳು ವಿಶ್ವಕ್ಕೆ ಅಷ್ಟಾಂಗ ಯೋಗಗಳ ಶಿಕ್ಷಣ ನೀಡಿದ್ದಾರೆ. ಭಗವಂತ ಹಠಯೋಗ, ಕರ್ಮಯೋಗ, ಜ್ಞಾನಯೋಗಗಳ ಮೂಲಕ ಮನುಷ್ಯನ ಅಂತಃಸತ್ವ ಹೆಚ್ಚಿಸಿಕೊಳ್ಳಲು ದಾರಿ ತೋರಿದ್ದಾನೆ. ಋಷಿಮುನಿಗಳು ಅಷ್ಟಾಂಗ ಯೋಗಗಳ ಮೂಲಕ ನಮ್ಮ ಜೀವಕೋಶಕ್ಕೆ ಶಕ್ತಿ ತುಂಬುವಂತೆ ಮಾಡಿದ್ದಾರೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಬ್ರಾಯ ಭಟ್ಟ ತಿಳಿಸಿದರು.
ಜೂ. ೨೧ರಂದು ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್, ಅಡಿಕೆ ವ್ಯವಹಾರಸ್ಥರ ಸಂಘ ಯಲ್ಲಾಪುರ ಇವುಗಳ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ನಡೆದ 10ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.ಯೋಗವು ಮನುಷ್ಯನಿಗೆ ಅತ್ಯಂತ ಉಪಯುಕ್ತವಾದುದರಿಂದಲೇ, ನಮ್ಮ ದೈನಂದಿನ ಜೀವನದಲ್ಲಿ ಒಂದು ಗಂಟೆಯಾದರೂ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಪರಿಪಾಠ ಬೆಳೆಸಿಕೊಂಡರೆ ಆಜೀವ ಪರ್ಯಂತ ಆರೋಗ್ಯಕರ ಜೀವನ ನಡೆಸಬಹುದು. ಯೋಗ ಸಾಧನೆಗೆ ನಿರಂತರತೆ ಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅಶೋಕ ಭಟ್ಟ ಮಾತನಾಡಿ, ಭಾರತದ ಸಾಂಸ್ಕೃತಿಕ ಪರಂಪರೆಗಳು ನಮ್ಮ ಜೀವನ ಶೈಲಿಯನ್ನು ರೂಪಿಸಿವೆ. ನಮಗೆ ಋಷಿ ಪರಂಪರೆ, ಮುನಿ ಪರಂಪರೆಗಳು ಮಹತ್ವದ ಕೊಡುಗೆ ನೀಡಿವೆ. ಆದರೆ, ಮುನಿ ಪರಂಪರೆ ನಮ್ಮ ಸಮಾಜದ ಜತೆಗಿದ್ದು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ದೈಹಿಕ ಸದೃಢತೆಗೆ ಪ್ರಾಣಾಯಾಮ ಹೆಚ್ಚು ಪರಿಣಾಮಕಾರಿ. ಉಸಿರಾಟ ಕ್ರಿಯೆಗೆ ಯೋಗದಲ್ಲಿ ಹಲವು ಮಾರ್ಗಗಳನ್ನು ತೋರಿಸಲಾಗಿದೆ. ಆದ್ದರಿಂದ ಯೋಗ ಸಾಧನೆ ನಮ್ಮೆಲ್ಲರ ನಿತ್ಯ ಜೀವನದ ಅಂಗವಾಗಬೇಕು ಎಂದರು.
ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಮಾತನಾಡಿ, ಪೂರ್ವಜರು ನೀಡಿದ ಯೋಗ ವಿಶ್ವಮಾನ್ಯವಾಗಿದೆ. ಅದಕ್ಕೆ ನಮ್ಮ ಪ್ರಧಾನಿ ಮೋದಿ ಜಗತ್ತಿನೆಲ್ಲೆಡೆ ಯೋಗದ ಮಹತ್ವವನ್ನು ಪ್ರಚುರಪಡಿಸಿದ್ದಾರೆ ಎಂದರು.ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ, ಪತಂಜಲಿ ಯೋಗ ಸಮಿತಿ ತಾಲೂಕಾಧ್ಯಕ್ಷ ವಿ.ಕೆ. ಭಟ್ಟ ಶೀಗೇಪಾಲ, ಯೋಗ ಸಮಿತಿಯ ಮಹಿಳಾ ಪ್ರಭಾರಿ ಶೈಲಜಾ ಭಟ್ಟ ಶುಭ ಹಾರೈಸಿದರು. ಜಿಲ್ಲಾ ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೇಜಡ್ಡಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗ ಸಮಿತಿಯ ಉಪಾಧ್ಯಕ್ಷ ನಾಗೇಶ ರಾಯ್ಕರ್ ಸಹಕರಿಸಿದರು. ಆಶಾ ಬಗನಗದ್ದೆ ಮತ್ತು ಕಾವೇರಿ ಹೆಗಡೆ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಪಾದ ಭಟ್ಟ ಮಣ್ಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಜಿ.ಎಸ್. ಭಟ್ಟ ಹಳವಳ್ಳಿ ನಿರ್ವಹಿಸಿದರು. ಕಾರ್ಯದರ್ಶಿ ಸತೀಶ ಹೆಗಡೆ ವಂದಿಸಿದರು.