ಯೋಗದಿಂದ ಆರೋಗ್ಯಕರ ಜೀವನ: ರಾಮಚಂದ್ರ ಹೆಗಡೆ

KannadaprabhaNewsNetwork | Published : Oct 29, 2024 12:52 AM

ಸಾರಾಂಶ

ಶಾಸ್ತ್ರಗಳು ಹೇಳುವಂತೆ ಜೀವನದ ಎಲ್ಲ ತಪ್ಪುಗಳು ಈ ಕರ್ಮಭೂಮಿಯಲ್ಲಿ ಅನುಭವಿಸಿ ಹೋಗಬೇಕಾಗುತ್ತದೆ. ಯೋಗ ಮಾರ್ಗದಿಂದ ಕರ್ಮಫಲದ ಭವ ಬಂಧನವನ್ನು ದಾಟಿ ಹೋಗುವ ಪಥದ ದರ್ಶನವಾಗುತ್ತದೆ.

ಯಲ್ಲಾಪುರ: ಯೋಗದಿಂದ ಮನುಷ್ಯನ ಜೀವನ ಆರೋಗ್ಯ ಪಡೆಯಬಹುದು. ಜತೆಗೆ ಪರಮಾತ್ಮನ ಸಾನ್ನಿಧ್ಯಕ್ಕೆ ಸೇರುವ ಸಾರ್ಥಕ ಮಾರ್ಗದರ್ಶನದ ದಾರಿಯಲ್ಲಿ ಸಾಗಲು ಯೋಗ ಅಗ್ರಸ್ಥಾನವಿದೆ. ಆ ದೃಷ್ಟಿಯಲ್ಲಿ ಪತಂಜಲಿ ಯೋಗ ಸಮಿತಿ ವಿಶ್ವಮಾನ್ಯವಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯ ರಾಮಚಂದ್ರ ಹೆಗಡೆ ಶಿರಸಿ ತಿಳಿಸಿದರು.ಅ. ೨೭ರಂದು ಪಟ್ಟಣದ ಅಡಿಕೆ ಭವನದಲ್ಲಿ ಪತಂಜಲಿ ಯೋಗ ಸಮಿತಿ ಯಲ್ಲಾಪುರ ವತಿಯಿಂದ ನಡೆಯುತ್ತಿರುವ ನಿರಂತರ ಯೋಗ ತರಗತಿಗಳು ಪ್ರಾರಂಭವಾಗಿ ೧೫ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಾಸ್ತ್ರಗಳು ಹೇಳುವಂತೆ ಜೀವನದ ಎಲ್ಲ ತಪ್ಪುಗಳು ಈ ಕರ್ಮಭೂಮಿಯಲ್ಲಿ ಅನುಭವಿಸಿ ಹೋಗಬೇಕಾಗುತ್ತದೆ. ಯೋಗ ಮಾರ್ಗದಿಂದ ಕರ್ಮಫಲದ ಭವ ಬಂಧನವನ್ನು ದಾಟಿ ಹೋಗುವ ಪಥದ ದರ್ಶನವಾಗುತ್ತದೆ. ಹದಿನಾಲ್ಕು ವರ್ಷ ಸತತವಾಗಿ ಯೋಗವನ್ನು ಅಳವಡಿಸಿಕೊಂಡು ಯಲ್ಲಾಪುರದ ಪ್ರತಿಯೊಬ್ಬರಿಗೂ ಯೋಗ ಮಾರ್ಗದ ಸಾಧನೆಯ ಹಾದಿಯನ್ನು ತೋರಿಸಿಕೊಟ್ಟ ಇಲ್ಲಿನ ಪತಂಜಲಿ ಯೋಗ ಸಮಿತಿಯ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು. ಈ ಕಾರ್ಯ ಜರುಗಲು ಸ್ಥಳದಾನವನ್ನು ನೀಡಿ ಕೈಜೋಡಿಸಿದ ಅಡಕೆ ವ್ಯವಹಾರಸ್ಥರ ಸಂಘವನ್ನು ಅಭಿನಂದಿಸುತ್ತೇವೆ ಎಂದರು.ಜಿಲ್ಲಾ ಪತಂಜಲಿ ಯೋಗ ಸಮಿತಿ ಕಾರ್ಯದರ್ಶಿ ರಘುರಾಮ ಹೆಗಡೆ ಶಿರಸಿ ಮಾತನಾಡಿ, ಜಗತ್ತಿಗೆ ಭಾರತ ಎಲ್ಲವನ್ನು ನೀಡಿದೆ. ಅಂತೆಯೇ ಯೋಗ, ಅದರ ಭಾಗವಾದ ಅಷ್ಟಾಂಗ ಯೋಗದ ನಿಯಮದಂತೆ ನಾವು ಪಡೆದ ಪ್ರತಿಯೊಂದು ವಸ್ತುವನ್ನು ಅಥವಾ ಜ್ಞಾನವನ್ನು ಇತರರಿಗೂ ನೀಡಬೇಕು. ಆಸ್ತೇಯ ಎಂದರೆ ಯೋಗ ಜ್ಞಾನವನ್ನು ಎಲ್ಲರಿಗೂ ಪಸರಿಸುವಂತೆ ಮಾಡು ಎಂದಾಗಿದೆ ಎಂದರು. ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಅವರಿಗೆ ನಿರಂತರವಾಗಿ ಯೋಗ ತರಗತಿ ನಡೆಯಲು ಸ್ಥಳಾವಕಾಶವನ್ನು ಮಾಡಿಕೊಟ್ಟ ಕಾರಣ ಅವರನ್ನು ಸನ್ಮಾನಿಸಲಾಯಿತು.

ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಅಂತೆಯೇ ಲಯನ್ಸ್ ಜಿಲ್ಲಾ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೂ ಭಾಜನರಾದ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ಶಿಕ್ಷಕ ದಿವಾಕರ ಮರಾಠಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ವಿ.ಕೆ. ಭಟ್ಟ ಮಾತನಾಡಿದರು. ಪತಂಜಲಿ ಯೋಗ ಸಮಿತಿಯ ಉಪಾಧ್ಯಕ್ಷ ನಾಗೇಶ ರಾಯಕರ ಕಾರ್ಯದರ್ಶಿ ಸತೀಶ ಹೆಗಡೆ, ಮಹಿಳಾ ಪತಂಜಲಿ ಪ್ರಭಾರಿ ಶೈಲಶ್ರೀ ಭಟ್ಟ, ಶಿರಸಿ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಶ್ಯಾಮ ಭಟ್ಟ ಇದ್ದರು. ನ್ಯಾಯವಾದಿ ಜಿ.ಎಸ್.ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಾಯ ಭಟ್ಟ ವಂದಿಸಿದರು. ಶಿಕ್ಷಕ ಸದಾನಂದ ದಬಗಾರ್ ನಿರ್ವಹಿಸಿದರು.

Share this article